ರಾಹುಲ್ ಗಾಂಧಿ, ಪ್ರಕಾಶ್ ರೈ ಹಾಗೂ ವಿದ್ಯಾರ್ಥಿ ಪ್ರತಿಭಟನಾಕಾರರಿಗೆ ಜೀವ ಬೆದರಿಕೆ : ಸಿಪಿಐಎಂ ಖಂಡನೆ
ಝೆನ್ ಝೀ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ವಿರೋಧಿಸಿ ಬಿಜೆಪಿ ಉಡುಪಿಯಲ್ಲಿ ಆಯೋಜಿಸಿದ ಸಭೆಯು ಪ್ರತಿಭಟನಾ ಸಭೆಯ ಬದಲಿಗೆ, ಜೀವ ಬೆದರಿಕೆ ಒಡ್ಡುವ ಗೂಂಡಾ ಗ್ಯಾಂಗ್ ನ ಸಭೆಯಂತೆ ನಡೆದುಕೊಂಡಿದೆ. ಬಹುಷ ಜರ್ಮನಿಯಲ್ಲಿ ಹಿಟ್ಲರ್ ನ ನಾಜಿ ಸಂಘಟನೆಗಳ ಸಭೆಗಳು ಇದೇ ರೀತಿ ಇದ್ದಿರಬಹುದು ಎಂದು ಸಿಪಿಐಎಂ ಪಕ್ಷವು ಆಕ್ರೋಶ ವ್ಯಕ್ತಪಡಿಸಿದೆ.
ಮಂಗಳವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ರಾಹಲ್ ಗಾಂಧಿ ಹಾಗೂ ಪ್ರಕಾಶ್ ರೈ ಅವರಿಗೆ ನೇರವಾಗಿ ಕೊಲೆ ಬೆದರಿಕೆ ಒಡ್ಡಿದರು. ಪ್ರಕಾಶ್ ರೈ ಅವರನ್ನು ಅರಬ್ಬಿ ಸಮುದ್ರಕ್ಕೆ ತಳ್ಳುವುದಾಗಿ ಎಚ್ಚರಿಸಿದರೆ, ರಾಹುಲ್ ಗಾಂಧಿ ಅವರನ್ನು ಡ್ರಗ್ ಎಡಿಕ್ಟ್ ಎಂದು ನಿಂದಿಸಿದಲ್ಲದೆ, ಬಾಬರಿ ಮಸೀದಿ ದ್ವಂಸ ಮಾಡಿದಂತೆ ರಾಹುಲ್ ಗಾಂಧಿ ಅವರ ವಂಶ (ಕುಟುಂಬ)ವನ್ನೆ ದ್ವಂಸ ಮಾಡುವುದಾಗಿ ನೇರವಾಗಿ ಘೋಷಿಸಿದರು. ಮಣಿಪಾಲದಲ್ಲಿ ವಿದ್ಯಾರ್ಥಿ ಪ್ರತಿಭಟನೆಗೆ ನೇತೃತ್ವ ವಹಿಸಿದವರನ್ನು, ಅಲ್ಲಿನ ಫ್ಯಾಕಲ್ಟಿಗಳನ್ನು ಡ್ರಗ್ ದಂಧೆಯವರು ಎಂದು ಸುಳ್ಳು ಆರೋಪ ಹೊರಿಸಿದರು. ಅವರನ್ನು ಬಲಿ ಹಾಕಲಾಗುವುದು ಎಂದು ದ್ವೇಷ ಭಾಷಣ ಮಾಡಿದ್ದಾರೆ..
ಶಾಸಕ ಯಶ್ಪಾಲ್ ಸುವರ್ಣ ಹಾಗೂ ಬಿಜೆಪಿಯ ಈ ರಾಜಕೀಯ ಗೂಂಡಾಗಿರಿ, ಜೀವ ನಷ್ಟಗೊಳಿಸುವ ಬೆದರಿಕೆಗಳನ್ನು, ಫ್ಯಾಸಿಸ್ಟ್ ಮಾದರಿಯ ನಡೆಯನ್ನು ಕರಾವಳಿಯ ಜನತೆ ಏಕಕಂಠದಲ್ಲಿ ವಿರೋಧಿಸಬೇಕು. ನಾಗರಿಕ ಸಮಾಜದಲ್ಲಿ ಇಂತಹ ರಾಜಕೀಯ ಗೂಂಡಾಗಿರಿ, ಮಾಫಿಯಾ ಗಿರಿಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟ ಸಂದೇಶ ನೀಡಬೇಕು. ಕರಾವಳಿಯ ಜಾತ್ಯಾತೀತ, ಜನಪರ ಪಕ್ಷ ಸಂಘಟನೆಗಳು ಈ ವಿಷಯದಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು. ಕರ್ನಾಟಕ ಸರಕಾರ, ಉಡುಪಿ ಪೊಲೀಸರು ತಕ್ಷಣವೇ ಸೂಕ್ತ ಕಾನೂನು ಕ್ರಮಗಳನ್ನು ಜರುಗಿಸಬೇಕು ಎಂದು ಸಿಪಿಐಎಂ ಆಗ್ರಹಿಸಿದೆ.
ಸಿಪಿಐಎಂ ಪಕ್ಷವು ಬಿಜೆಪಿ ಹಾಗು ಉಡುಪಿ ಶಾಸಕ ಯಶ್ಪಾಲ್ ಸುವರ್ಣರ ಅನಾಗರಿಕ ನಡವಳಿಕೆ, ಗೂಂಡಾಗಿರಿ, ಕೊಲೆ ಬೆದರಿಕೆಗಳನ್ನು ಬಲವಾಗಿ ಖಂಡಿಸುತ್ತದೆ. ಉಡುಪಿ ಜಿಲ್ಲಾಡಳಿತ ತಕ್ಷಣವೆ ಕಾನೂನು ಕ್ರಮಗಳಿಗೆ ಮುಂದಾಗಬೇಕು ಎಂದು ಒತ್ತಾಯಿಸುತ್ತದೆ ಎಂದು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.