ಕರಾವಳಿಯಲ್ಲಿ ಅಧಿಕ ಪ್ರಸಂಗ ಮಾಡಿದರೆ ಅರಬ್ಬೀ ಸಮುದ್ರದಲ್ಲಿ ಎದ್ದೇಳಬೇಕು: ಯಶ್ಪಾಲ್ ಸುವರ್ಣ
ಕಲಾವಿದರನ್ನು ಒಟ್ಟುಗೂಡಿಸಿ ವಿಷ ಬೀಜ ಬಿತ್ತಲು ಯತ್ನಿಸುತ್ತಿರುವ ಪ್ರಕಾಶ್ ರಾಜ್ ಕರಾವಳಿಯಲ್ಲಿ ಬಂದು ಅಧಿಕ ಪ್ರಸಂಗ ಮಾಡಿದರೆ ಅರಬ್ಬೀ ಸಮುದ್ರದಲ್ಲಿ ಎದ್ದೇಳಬೇಕಾಗುತ್ತದೆ ಅಥವಾ ಮೀನಿಗೆ ಆಹಾರವಾಗಬೇಕಾಗುತ್ತದೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀಟ್ ವಿಚಾರವಾಗಿ ದೇಶದಲ್ಲಿ ಕಾಂಗ್ರೆಸ್ ಹಾಗೂ ಕಾಕ್ರೋಚ್ ಪಾರ್ಟಿ ಅರಾಜಕತೆ ಸೃಷ್ಟಿಸುತ್ತಿದೆ ಎಂದು ಆರೋಪಿಸಿ ಬಿಜೆಪಿ ಕರೆ ನೀಡಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು,
ಯಾವಾಗಲೂ ನಶೆಯಲ್ಲೇ ಇರುವ ರಾಹುಲ್ ಗಾಂಧಿ ಅವರಿಗೆ ಯಾವುದೇ ಸ್ಪಷ್ಟ ರಾಜಕೀಯ ನಿಲುವಿಲ್ಲ ಎಂದು ಆರೋಪಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿವಿಧ ಶಕ್ತಿಗಳನ್ನು ಬಳಸಿಕೊಂಡು ರಾಜಕೀಯ ನಡೆಸಲಾಗುತ್ತಿದೆ ಎಂದು ಟೀಕಿಸಿದರು. ತಮಿಳುನಾಡಿನಲ್ಲಿ ರಾಜೀವ್ ಗಾಂಧಿಯನ್ನು ಹತ್ಯೆಗೈದ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದ ಪಕ್ಷದೊಂದಿಗೆ ಕಾಂಗ್ರೆಸ್ ಕೈಜೋಡಿಸಿದೆ ಎಂದು ಅವರು ಆರೋಪಿಸಿದರು.
ನೀಟ್ ವಿಚಾರವಾಗಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರಲ್ಲಿ ಬಹುತೇಕರು ವಿದ್ಯಾರ್ಥಿಗಳಲ್ಲ ಎಂದು ಹೇಳಿದರು. ಪ್ರತಿಭಟನಾಕಾರರ ಹಿನ್ನೆಲೆ ಪರಿಶೀಲಿಸಿದರೆ ಸತ್ಯ ಹೊರಬೀಳಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಕಳೆದ ಕೆಲ ದಿನಗಳಲ್ಲಿ ಯಾರು ದೇಶಪ್ರೇಮಿಗಳು ಹಾಗೂ ಯಾರು ದೇಶದ್ರೋಹಿಗಳು ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದ ಅವರು, ರಾಹುಲ್ ಗಾಂಧಿ ಕುರಿತು ವೈಯಕ್ತಿಕ ಟೀಕೆಗಳನ್ನೂ ಮಾಡಿದರು. ಇದೇ ರೀತಿಯ ರಾಜಕೀಯ ಮುಂದುವರಿದರೆ ಬಿಜೆಪಿ ಕಾರ್ಯಕರ್ತರು ಸೂಕ್ತ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದರು.
ಮಣಿಪಾಲದ ಶಿಕ್ಷಣ ಸಂಸ್ಥೆಗಳ ಕುರಿತು ಮಾತನಾಡಿದ ಯಶ್‌ಪಾಲ್ ಸುವರ್ಣ, ಸಂಸ್ಥೆಗಳ ಬಗ್ಗೆ ಗೌರವವಿದ್ದರೂ ವಿದ್ಯಾರ್ಥಿಗಳಲ್ಲಿ ತಪ್ಪು ವಿಚಾರಧಾರೆ ಬಿತ್ತಲಾಗುತ್ತಿದೆ ಎಂದು ಆರೋಪಿಸಿದರು. ಅಲ್ಲಿನ ಕೆಲ ಸಿಬ್ಬಂದಿ ಡ್ರಗ್ಸ್ ಪೂರೈಕೆಯಲ್ಲಿ ತೊಡಗಿದ್ದಾರೆ ಎಂಬ ಮಾಹಿತಿಯೂ ಇದೆ ಎಂದು ಅವರು ಹೇಳಿದರು. ಈ ಆರೋಪಗಳಿಗೆ ಯಾವುದೇ ಪುರಾವೆಗಳನ್ನು ಅವರು ಸಾರ್ವಜನಿಕವಾಗಿ ಮಂಡಿಸಲಿಲ್ಲ. ಮಣಿಪಾಲದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿತ್ತು, ಆದರೆ ಅದು ಆಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಹೋರಾಟದ ಹಿಂದೆ ಕೆಲವು ಪ್ರಮುಖ ವ್ಯಕ್ತಿಗಳ ಬೆಂಬಲವೂ ಇದೆ ಎಂಬ ಮಾಹಿತಿ ಇದೆ ಎಂದು ಆರೋಪಿಸಿದರು.
ಇದು ಕೇವಲ ಪ್ರತಿಭಟನೆ ಅಲ್ಲ, ಕೊನೆಯ ಎಚ್ಚರಿಕೆ ಎಂದು ಹೇಳಿದ ಶಾಸಕ, ಕಲಾವಿದರ ಬಗ್ಗೆ ಮಾತನಾಡುತ್ತಾ ನಟ ಪ್ರಕಾಶ್ ರೈ ಕರಾವಳಿಗೆ ಬಂದು ಪ್ರಚೋದನಕಾರಿ ಹೇಳಿಕೆ ನೀಡಿದರೆ ತೀವ್ರ ಪ್ರತಿಕ್ರಿಯೆ ಎದುರಿಸಬೇಕಾಗುತ್ತದೆ ಎಂಬ ವಿವಾದಾತ್ಮಕ ಹೇಳಿಕೆಯನ್ನೂ ನೀಡಿದರು.