ಮಂಗಳೂರು ಲಾಲ್‌ಬಾಗ್ ಸಿಗ್ನಲ್ ಬಳಿ ರೌಡಿಶೀಟರ್ ಮೇಲೆ ತಲವಾರು ದಾಳಿ
Saturday, July 25, 2026
ಮಂಗಳೂರು ನಗರದ ಲಾಲ್‌ಬಾಗ್ ಸಿಗ್ನಲ್ ಸಮೀಪ ಶನಿವಾರ ಮಧ್ಯಾಹ್ನ ಸುಮಾರು 1:45ರ ವೇಳೆಗೆ ರೌಡಿಶೀಟರ್ ಮೇಲೆ ತಲವಾರು ದಾಳಿ ನಡೆದಿದೆ.
ದಾಳಿಯಲ್ಲಿ ಗಾಯಗೊಂಡಿರುವ ವ್ಯಕ್ತಿಯನ್ನು ವಿಕ್ಕಿ ಬಪ್ಪಲ್ ಎಂದು ಗುರುತಿಸಲಾಗಿದೆ. ಈತ ರೌಡಿಶೀಟರ್ ಆಗಿದ್ದು, ಮಾದಕವಸ್ತು ಮಾರಾಟ ಪ್ರಕರಣಗಳ ಹಿನ್ನೆಲೆಯಲ್ಲಿ ಪೊಲೀಸ್ ಕಣ್ಗಾವಲಿನಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ವಿಕ್ಕಿ ಬಪ್ಪಲ್ ಬೈಕ್‌ನಲ್ಲಿ ಲಾಲ್‌ಬಾಗ್ ಸಿಗ್ನಲ್ ಬಳಿ ಸಂಚರಿಸುತ್ತಿದ್ದ ವೇಳೆ, ಮತ್ತೊಂದು ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಯೊಬ್ಬ ಏಕಾಏಕಿ ತಲವಾರಿನಿಂದ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾನೆ.
ದಾಳಿಯಿಂದ ವಿಕ್ಕಿ ಬಪ್ಪಲ್ ಅವರ ಕುತ್ತಿಗೆ ಭಾಗಕ್ಕೆ ಆಳವಾದ ಗಾಯವಾಗಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಆರೋಪಿಯ ಪತ್ತೆಗೆ ವಿಶೇಷ ತಂಡವನ್ನು ರಚಿಸಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.