-->
ನಾಡದೋಣಿಗಳಿಗೆ ಎಲ್‌ಪಿಜಿ ಆಧಾರಿತ ಔಟ್‌ಬೋರ್ಡ್ ಎಂಜಿನ್ ಬಳಕೆಗೆ ಸರ್ಕಾರದ ಪ್ರೋತ್ಸಾಹ ಅಗತ್ಯ: ಯಶ್ಪಾಲ್ ಸುವರ್ಣ

ನಾಡದೋಣಿಗಳಿಗೆ ಎಲ್‌ಪಿಜಿ ಆಧಾರಿತ ಔಟ್‌ಬೋರ್ಡ್ ಎಂಜಿನ್ ಬಳಕೆಗೆ ಸರ್ಕಾರದ ಪ್ರೋತ್ಸಾಹ ಅಗತ್ಯ: ಯಶ್ಪಾಲ್ ಸುವರ್ಣ


ಭವಿಷ್ಯದ ಮೀನುಗಾರಿಕೆಯನ್ನು ಗಮನದಲ್ಲಿಟ್ಟುಕೊಂಡು ನಾಡದೋಣಿ ಮೀನುಗಾರಿಕಾ ದೋಣಿಗಳಿಗೆ ಎಲ್‌ಪಿಜಿ ಆಧಾರಿತ ಔಟ್‌ಬೋರ್ಡ್ ಎಂಜಿನ್ ಬಳಕೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶೇಷ ಪ್ರೋತ್ಸಾಹ ನೀಡಬೇಕಿದೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ವತಿಯಿಂದ ಮಲ್ಪೆ ಮೀನುಗಾರರ ಸಂಘದ ಸಭಾಭವನದಲ್ಲಿ ಆಯೋಜಿಸಲಾದ ನಾಡದೋಣಿ ಮೀನುಗಾರಿಕೆಯಲ್ಲಿ ಎಲ್‌ಪಿಜಿ ಆಧಾರಿತ ಔಟ್‌ಬೋರ್ಡ್ ಎಂಜಿನ್ ಬಳಕೆಯ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸೀಮೆ ಎಣ್ಣೆಗೆ ಪರ್ಯಾಯವಾಗಿ ಎಲ್‌ಪಿಜಿ ಆಧಾರಿತ ಔಟ್‌ಬೋರ್ಡ್ ಎಂಜಿನ್ ಬಳಕೆಯ ಬಗ್ಗೆ ನಾಡದೋಣಿ ಮೀನುಗಾರರಿಗೆ ಅರಿವು ಮೂಡಿಸಲಾಗುತ್ತಿದೆ. ಇದರಿಂದ ಮೀನುಗಾರಿಕೆಯ ಇಂಧನ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದ್ದು, ಶೀಘ್ರದಲ್ಲೇ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಎಲ್‌ಪಿಜಿ ಕಿಟ್ ಅಳವಡಿಕೆಗೆ ಸಬ್ಸಿಡಿ ನೀಡುವಂತೆ ಕೇಂದ್ರ ಮೀನುಗಾರಿಕೆ ಹಾಗೂ ಪೆಟ್ರೋಲಿಯಂ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಅದೇ ರೀತಿ ರಾಜ್ಯ ಸರ್ಕಾರವೂ ಈ ಯೋಜನೆಗೆ ಸಹಕಾರ ನೀಡುವಂತೆ ಮುಖ್ಯಮಂತ್ರಿ ಅವರಿಗೆ ನಾಡದೋಣಿ ಮೀನುಗಾರರ ಪರವಾಗಿ ಮನವಿ ಸಲ್ಲಿಸುವುದಾಗಿ ಯಶ್ ಪಾಲ್ ಸುವರ್ಣ ಹೇಳಿದರು.

ಕಾರ್ಯಕ್ರಮದಲ್ಲಿ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ನಾರಾಯಣ ಕರ್ಕೇರ, ಮಲ್ಪೆ ನಾಡದೋಣಿ ಸಹಕಾರಿ ಸಂಘದ ಅಧ್ಯಕ್ಷ ಸುಂದರ ಸಾಲ್ಯಾನ್, ಬೈಂದೂರು ವಲಯದ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಕುಮಾರ್ ಖಾರ್ವಿ, ಗಂಗೊಳ್ಳಿ ವಲಯದ ಅಧ್ಯಕ್ಷ ಯಶವಂತ ಖಾರ್ವಿ, ಬೇಸಿಗೆ ನಾಡದೋಣಿ ಸಂಘದ ಅಧ್ಯಕ್ಷ ಕೃಷ್ಣ, ಇಂಡೆನ್ ಗ್ಯಾಸ್ ಏಜೆನ್ಸಿಯ ದಿನೇಶ್ ಪುತ್ರನ್, ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕಿ ಸವಿತಾ ಖಾದ್ರಿ, ವನಾಜ್ ಇಂಜಿನಿಯರಿಂಗ್ (ಪುಣೆ) ಸಂಸ್ಥೆಯ ಅಧಿಕಾರಿ ಮುರಳೀಧರ್, ಐಒಸಿಎಲ್ ಸಂಸ್ಥೆಯ ಹರ್ದೇವ್ ಸಿಂಗ್ ಹಾಗೂ ಮೀನುಗಾರ ಮುಖಂಡರು ಉಪಸ್ಥಿತರಿದ್ದರು.

ಮೀನು ಮಾರಾಟ ಫೆಡರೇಶನ್ ನಿರ್ದೇಶಕ ರಾಮಚಂದ್ರ ಕುಂದರ್ ಪ್ರಸ್ತಾವನೆ ಸಲ್ಲಿಸಿ ಸ್ವಾಗತಿಸಿದರು. ಮಟ್ಟು ಯತೀಶ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. 

Ads on article

Advertise in articles 1

advertising articles 2

Advertise under the article