ನೀಟ್ ವಿಚಾರದಲ್ಲಿ ವಿದ್ಯಾರ್ಥಿಗಳ ಹೆಸರಿನಲ್ಲಿ ಕಾಂಗ್ರೆಸ್ ರಾಜಕೀಯ: ಅಕ್ಷಿತ್ ಸುವರ್ಣ
ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಅಗತ್ಯ ಕ್ರಮಗಳನ್ನು ಕೈಗೊಂಡು ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಮುಂದಾಗಿರುವ ಸಂದರ್ಭದಲ್ಲಿಯೂ ಕಾಂಗ್ರೆಸ್ ಪಕ್ಷ ವಿದ್ಯಾರ್ಥಿಗಳ ಹೆಸರಿನಲ್ಲಿ ಪ್ರತಿಭಟನೆ ನಡೆಸಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ ಎಂದು ಯುವ ಜನತಾದಳ (ಜಾತ್ಯತೀತ) ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಅಕ್ಷಿತ್ ಸುವರ್ಣ ಆರೋಪಿಸಿದ್ದಾರೆ.
ವಿದ್ಯಾರ್ಥಿಗಳ ಹಿತಾಸಕ್ತಿಯ ಬಗ್ಗೆ ನಿಜವಾದ ಕಾಳಜಿ ಇದ್ದರೆ ಪರೀಕ್ಷಾ ವ್ಯವಸ್ಥೆಯ ಸುಧಾರಣೆಗೆ ರಚನಾತ್ಮಕ ಸಲಹೆಗಳನ್ನು ನೀಡುವ ಮೂಲಕ ಸಹಕಾರ ನೀಡಬೇಕಾಗಿತ್ತು. ಆದರೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಕ್ರಿಯೆ ನಡೆಯುತ್ತಿರುವಾಗಲೂ ವಿದ್ಯಾರ್ಥಿಗಳನ್ನು ಬೀದಿಗಿಳಿಸಿ ಪ್ರತಿಭಟನೆ ನಡೆಸುತ್ತಿರುವುದು ರಾಜಕೀಯ ಪ್ರೇರಿತ ನಡೆಯಾಗಿದೆ ಎಂದು ಟೀಕಿಸಿದ್ದಾರೆ.
ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆ ಉಂಟಾಗಿದ್ದ ಗೊಂದಲಗಳ ಹಿನ್ನೆಲೆಯಲ್ಲಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದು, ಪರೀಕ್ಷಾ ವ್ಯವಸ್ಥೆಯನ್ನು ಇನ್ನಷ್ಟು ಪಾರದರ್ಶಕ ಹಾಗೂ ವಿಶ್ವಾಸಾರ್ಹಗೊಳಿಸಲು ಅಗತ್ಯ ಕ್ರಮಗಳನ್ನು ಆರಂಭಿಸಿದ್ದಾರೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳ ಆತಂಕವನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುವುದು ಸೂಕ್ತವಲ್ಲ ಎಂದು ಅವರು ಹೇಳಿದ್ದಾರೆ.
ವಿದ್ಯಾರ್ಥಿಗಳ ಭವಿಷ್ಯ, ಶಿಕ್ಷಣದ ಗುಣಮಟ್ಟ, ಪಾರದರ್ಶಕ ಪರೀಕ್ಷಾ ವ್ಯವಸ್ಥೆ ಹಾಗೂ ಉನ್ನತ ಶಿಕ್ಷಣದ ಅವಕಾಶಗಳ ಕುರಿತು ಎಲ್ಲ ರಾಜಕೀಯ ಪಕ್ಷಗಳು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ವಿದ್ಯಾರ್ಥಿಗಳನ್ನು ರಾಜಕೀಯದ ಸಾಧನವಾಗಿ ಬಳಸುವ ಬದಲು ಅವರ ಶೈಕ್ಷಣಿಕ ಪ್ರಗತಿ ಮತ್ತು ಭವಿಷ್ಯಕ್ಕೆ ಆದ್ಯತೆ ನೀಡಬೇಕು ಎಂದು ಅಕ್ಷಿತ್ ಸುವರ್ಣ ಆಗ್ರಹಿಸಿದ್ದಾರೆ.