ಉಡುಪಿ: ಸಿಎ, ವೈದ್ಯರು, ಪತ್ರಕರ್ತರಿಗೆ ಮಲಬಾರ್ ವಿಶ್ವ ಗೌರವ ಪುರಸ್ಕಾರ
ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ವತಿಯಿಂದ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಹಯೋಗದಲ್ಲಿ ವೈದ್ಯರ ದಿನ, ಲೆಕ್ಕ ಪರಿಶೋಧಕರ ದಿನ ಮತ್ತು ಪತ್ರಿಕಾ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳ ಸಾಧಕರಿಗೆ 'ಮಲಬಾರ್ ವಿಶ್ವ ಗೌರವ ಪುರಸ್ಕಾರವನ್ನು ಬುಧವಾರ ಉಡುಪಿ ಶಾಖೆಯಲ್ಲಿ ಪ್ರದಾನಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಮಕ್ಕಳು ಮತ್ತು ಯುವಜನತೆ ಸಮಾಜಮುಖಿಯಾಗಿ ಪರಿಸರ ಕಾಳಜಿ ಬೆಳೆಸಿಕೊಳ್ಳುವುದು ಅಗತ್ಯ. ಮಕ್ಕಳಿಗೆ ಕೇವಲ ಉಪದೇಶ ಮಾಡುವುದಕ್ಕಿಂತ ಉತ್ತಮ ಕಾರ್ಯಗಳನ್ನು ಮಾಡಿ ತೋರಿಸಬೇಕು. ಮನೆಗಳಲ್ಲಿ ಗ್ರಂಥಾಲಯಗಳ ನಿರ್ಮಾಣದಿಂದ ಬೌದ್ಧಿಕ ಶ್ರೀಮಂತಿಕೆ ಹೆಚ್ಚುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪಾಂಡೇಶ್ವರ ಗುರುಕುಲದ ಡಾ. ವಿಜಯಕುಮಾರ್ ಮಂಜರ್ ಮಾತನಾಡಿ, ಸಂಗೀತ, ಕಲೆ ಮತ್ತು ಸಾಹಿತ್ಯ ಜೀವನವನ್ನು ಪರಿಪೂರ್ಣಗೊಳಿಸುವ ಅಂಶಗಳಾಗಿವೆ. ವೈದ್ಯರು ವ್ಯಕ್ತಿಯ ಆರೋಗ್ಯವನ್ನು, ಲೆಕ್ಕ ಪರಿಶೋಧಕರು ಆರ್ಥಿಕ ಶಿಸ್ತುನ್ನು ಹಾಗೂ ಪತ್ರಕರ್ತರು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಮಹತ್ತರ ಜವಾಬ್ದಾರಿ ಹೊಂದಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮಲಬಾರ್ ವಿಶ್ವ ವೈದ್ಯ ಪುರಸ್ಕಾರವನ್ನು ಡಾ. ಎ. ರಾಮಚಂದ್ರ ಬಾಯರಿ, ಡಾ. ಕೆ. ಸತೀಶ್ ಕಾಮತ್ ಹಾಗೂ ಡಾ. ಇಂದಿರಾ ವಿ. ಶಾನುಭೋಗ್ ಅವರಿಗೆ, ಮಲಬಾರ್ ವಿಶ್ವ ಲೆಕ್ಕ ಪರಿಶೋಧಕರ ಪುರಸ್ಕಾರವನ್ನು ಸಿಎ ದೇವ ಆನಂದ್ ಹಾಗೂ ಸಿಎ ಗಣೇಶ್ ಎರ್ಮಾಳು ಅವರಿಗೆ, ಮಲಬಾರ್ ವಿಶ್ವ ಪತ್ರಿಕಾ ಪುರಸ್ಕಾರವನ್ನು ಶಶಿಧರ್ ಮಾಸ್ತಿಬೈಲು, ಬಾಲಕೃಷ್ಣ ಪೂಜಾರಿ ಉಚ್ಚಿಲ ಮತ್ತು ರಾಮ್ ಅಜೆಕಾರ್ ಅವರಿಗೆ ಪ್ರದಾನಿಸಲಾಯಿತು.
ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ಯು. ವಿಶ್ವನಾಥ್ ಶೆಣೈ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ. ಮಾತನಾಡಿದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಶಂಕರ್ ಮತ್ತು ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ವ್ಯವಸ್ಥಾಪಕ ವಿಜಯ್ ಕುಮಾರ್ ಡಿ. ಉಪಸ್ಥಿತರಿದ್ದರು.
ಡಾ. ಭಾರ್ಗವಿ ಐತಾಳ್, ಸಿದ್ಧಬಸಯ್ಯಸ್ವಾಮಿ ಚಿಕ್ಕಮಠ ಹಾಗೂ ರಂಜನಿ ವಸಂತ್ ಸನ್ಮಾನ ಪತ್ರ ವಾಚಿಸಿದರು. ವಿದ್ಯಾ ಶ್ಯಾಮಸುಂದರ್ ಪ್ರಾರ್ಥನೆ ನೆರವೇರಿಸಿದರು. ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು. ಜನಾರ್ದನ ಕೊಡವೂರು ಸ್ವಾಗತಿಸಿ, ವಿಘ್ನೇಶ್ವರ ಅಡಿಗ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಶ್ ಪಣಿಯಾಡಿ ವಂದಿಸಿದರು.