ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಆಕ್ಷೇಪಾರ್ಹ ಭಾಷಣ: ಸಹಬಾಳ್ವೆ ಸಂಘಟನೆ ಖಂಡನೆ
ವಿದ್ಯಾರ್ಥಿ-ಯುವಜನರ ಚಳುವಳಿಯನ್ನು ಬೆಂಬಲಿಸಿದವರ ವಿರುದ್ಧ ಬಿಜೆಪಿ ನಡೆಸಿದ ಪ್ರತಿಭಟನೆ ಹಾಗೂ ಉಡುಪಿ ಶಾಸಕ ಯಶಪಾಲ ಸುವರ್ಣ ನೀಡಿರುವ ಹೇಳಿಕೆಗಳನ್ನು ಸಹಬಾಳ್ವೆ ಉಡುಪಿ ಜಿಲ್ಲೆ ತೀವ್ರವಾಗಿ ಖಂಡಿಸಿದೆ.
ಸಂಘಟನೆಯ ಪ್ರಧಾನ ಸಂಚಾಲಕ ಕೆ. ಫಣಿರಾಜ್ ಅವರು ಪ್ರಕಟಣೆ ನೀಡಿದ್ದು, ವಿದ್ಯಾರ್ಥಿ-ಯುವಜನರ ನಿರಂತರ ಶಾಂತಿಯುತ ಹೋರಾಟವು ದೇಶದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಈ ಹೋರಾಟದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸಿರುವುದನ್ನು ವಿನಯದಿಂದ ಸ್ವೀಕರಿಸುವ ಬದಲು, ಬಿಜೆಪಿ ಚಳುವಳಿಗಾರರು ಹಾಗೂ ಅವರನ್ನು ಬೆಂಬಲಿಸಿದ ಪ್ರಜಾಪ್ರಭುತ್ವವಾದಿಗಳ ವಿರುದ್ಧ ಅವಮಾನಕರ ಪ್ರತಿಭಟನೆ ನಡೆಸಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.
ಜುಲೈ 28ರಂದು ಉಡುಪಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಶಾಸಕ ಯಶಪಾಲ ಸುವರ್ಣ ಅವರು ಚಳುವಳಿಗಾರರು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ನಟ ಪ್ರಕಾಶ್ ರಾಜ್ ವಿರುದ್ಧ ಕ್ರಿಮಿನಲ್ ಅಪರಾಧದ ಆರೋಪ ಮಾಡುವ ರೀತಿಯಲ್ಲಿ ಮಾತನಾಡಿರುವುದಲ್ಲದೆ, ಮಣಿಪಾಲ ಮಾಹೆ ವಿಶ್ವವಿದ್ಯಾಲಯದ ಅನಾಮಧೇಯ ಅಧ್ಯಾಪಕರ ವಿರುದ್ಧವೂ ನಿರಾಧಾರ ಆರೋಪಗಳನ್ನು ಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ಆರೋಪಿಸಲಾಗಿದೆ.
ಶಾಸಕರು ತಮ್ಮ ಹುದ್ದೆಯ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು. ಯಾವುದೇ ಪಕ್ಷದವರಾಗಿದ್ದರೂ ಸಂವಿಧಾನಬದ್ಧ ಹುದ್ದೆಯ ಮಿತಿಯನ್ನು ಮೀರಿ ನಡೆದುಕೊಂಡರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವುದು ಸರ್ಕಾರದ ಕರ್ತವ್ಯವಾಗಿದೆ. ಆದ್ದರಿಂದ ಕರ್ನಾಟಕ ಸರ್ಕಾರದ ಗೃಹ ಇಲಾಖೆ ಶಾಸಕ ಯಶಪಾಲ ಸುವರ್ಣ ಅವರ ಹೇಳಿಕೆ ಮತ್ತು ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಹಬಾಳ್ವೆ ಉಡುಪಿ ಜಿಲ್ಲೆ ಆಗ್ರಹಿಸಿದೆ.