ಆಗಸ್ಟ್ ಅಂತ್ಯದೊಳಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕ– ಎಐಸಿಸಿ ವೀಕ್ಷಕ ಹಿಮ್ಮತ್ ಸಿಂಗ್ ಪಟೇಲ್
Saturday, July 25, 2026
ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಘಟನೆ ಬಲಪಡಿಸುವ ಉದ್ದೇಶದಿಂದ ಎಐಸಿಸಿ ರೂಪಿಸಿರುವ "ಸೃಜನ ಸಂಘಟನಾ ಅಭಿಯಾನ"ದಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಎಐಸಿಸಿ ವೀಕ್ಷಕ ಹಿಮ್ಮತ್ ಸಿಂಗ್ ಪಟೇಲ್ ತಿಳಿಸಿದ್ದಾರೆ.
ಈ ಕುರಿತು ಉಡುಪಿಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರ ನಿರ್ದೇಶನದಂತೆ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನನ್ನು ತಲುಪುವ ನಾಯಕತ್ವವನ್ನು ಆಯ್ಕೆ ಮಾಡುವುದು ನಮ್ಮ ಉದ್ದೇಶವಾಗಿದೆ. ಉಡುಪಿ ಜಿಲ್ಲೆಯಲ್ಲಿ 10 ಬ್ಲಾಕ್‌ಗಳಿದ್ದು, ಅಲ್ಲಿನ ಕಾರ್ಯಕರ್ತರ ಅಭಿಪ್ರಾಯ, ಅಭ್ಯರ್ಥಿಯ ಬಹುಮತದ ಬೆಂಬಲ, ಪಕ್ಷದ ಮೇಲಿನ ನಿಷ್ಠೆ ಹಾಗೂ ತಳಮಟ್ಟದ ಕಾರ್ಯಕರ್ತರೊಂದಿಗೆ ಇರುವ ನೇರ ಸಂಪರ್ಕ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಿ ಜಿಲ್ಲಾ ಅಧ್ಯಕ್ಷರನ್ನು ನೇಮಕ ಮಾಡಲಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅನ್ನು ಇನ್ನಷ್ಟು ಬಲಿಷ್ಠಗೊಳಿಸುವುದು ನಮ್ಮ ಪ್ರಮುಖ ಗುರಿಯಾಗಿದೆ. ತಳಮಟ್ಟದ ಕಾರ್ಯಕರ್ತರೇ ಯಾರು ಜಿಲ್ಲಾ ಅಧ್ಯಕ್ಷರಾಗಬೇಕು ಎಂಬುದನ್ನು ನಿರ್ಧರಿಸಲಿದ್ದಾರೆ. ಎಐಸಿಸಿ ಸಿದ್ಧಪಡಿಸಿರುವ ವ್ಯವಸ್ಥಿತ ಮಾದರಿಯ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.
ವೀಕ್ಷಕರ ವರದಿ ಸಿದ್ಧಪಡಿಸಲು ಕನಿಷ್ಠ 10 ದಿನಗಳು ಬೇಕಾಗುತ್ತದೆ. ವರದಿ ಸಲ್ಲಿಕೆಯಾದ ಬಳಿಕ ಅದರ ವಿಶ್ಲೇಷಣೆ ನಡೆಸಿ, ಪರಿಶೀಲನಾ ಸಭೆಯ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಆಗಸ್ಟ್ ಅಂತ್ಯದೊಳಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಹೆಸರನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಇಚ್ಛಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕು ಎಂದು ಹಿಮ್ಮತ್ ಸಿಂಗ್ ಪಟೇಲ್ ತಿಳಿಸಿದ್ದಾರೆ.
