ವಾರಸುದಾರರು ಪತ್ತೆಯಾಗದ ಅನಾಥ ಮೃತದೇಹಗಳ ಅಂತ್ಯಸಂಸ್ಕಾರ
ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದ ಶೀತಲೀಕರಣ ಘಟಕದಲ್ಲಿ ಕಳೆದ 50 ದಿನಗಳಿಂದ ಸಂರಕ್ಷಿಸಿಡಲಾಗಿದ್ದ ಇಬ್ಬರು ಅನಾಥ ಪುರುಷರ ಮೃತದೇಹಗಳನ್ನು ಬೀಡಿನಗುಡ್ಡೆ ದಫನಭೂಮಿಯಲ್ಲಿ ಗೌರವಯುತ ದಫನ ಮಾಡಲಾಯಿತು.
ಸಾರ್ವಜನಿಕ ಸ್ಥಳಗಳಲ್ಲಿ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಇಬ್ಬರು ರೋಗಿಗಳನ್ನು ಸಮಾಜಸೇವಕ ಹಾಗೂ ನಾಗರಿಕ ಸಮಿತಿಯ ಸಂಚಾಲಕರಾದ ನಿತ್ಯಾನಂದ ಒಳಕಾಡು ಅವರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದರು.
ಮೃತರ ವಾರಸುದಾರರನ್ನು ಪತ್ತೆಹಚ್ಚುವ ಉದ್ದೇಶದಿಂದ ಮಾಧ್ಯಮಗಳ ಮೂಲಕ ಸಾರ್ವಜನಿಕ ಪ್ರಕಟಣೆ ನೀಡಲಾಗಿತ್ತು. ಆದಾಗ್ಯೂ ಯಾವುದೇ ವಾರಸುದಾರರು ಪತ್ತೆಯಾಗದ ಹಿನ್ನೆಲೆಯಲ್ಲಿ, ಅಗತ್ಯ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರ ನೇತೃತ್ವದಲ್ಲಿ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಗೌರವಯುತವಾಗಿ ದಫನ ಕಾರ್ಯ ನೆರವೇರಿಸಲಾಯಿತು.
ನಗರ ಪೊಲೀಸ್ ಠಾಣೆಯ ಮುಖ್ಯ ಆರಕ್ಷಕ ಜಾಸ್ವ ಹಾಗೂ ಆರಕ್ಷಕ ಮಲ್ಲಿಕಾರ್ಜುನ ಅವರು ಮಹಜರು ಸೇರಿದಂತೆ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದರು.
ಈ ಸಂದರ್ಭದಲ್ಲಿ ನಾಗರಿಕ ಸಮಿತಿಯ ಕಾರ್ಯಕರ್ತರಾದ ದೇವಿಕಿ ಬಾರ್ಕೂರು, ವಸಂತಿ ಸಾಸ್ತಾನ, ಸತೀಶ್ ಕುಮಾರ್ ಹಾಗೂ ವಿಕಾಸ್ ಶೆಟ್ಟಿ ಉಪಸ್ಥಿತರಿದ್ದರು. ಫ್ಲವರ್ ವಿಷ್ಣು, ಪ್ರಕಾಶ್ ಭಟ್, ನಗರಸಭೆ ಹಾಗೂ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಸಿಬ್ಬಂದಿ ಸಹಕಾರ ನೀಡಿದರು.