ಮಾದಕ ವಸ್ತುಗಳ ವರ್ಜನೆಯಿಂದ ಸ್ವಸ್ಥ ಸಮಾಜ ನಿರ್ಮಾಣ: ಡಾ. ವಿರೂಪಾಕ್ಷ ದೇವರಮನೆ
Wednesday, July 29, 2026
ಮಾದಕ ವಸ್ತುಗಳ ಸೇವನೆ ಇಡೀ ಜೀವನವನ್ನೇ ಹಾಳು ಮಾಡುವ ಒಂದು ಸಾಮಾಜಿಕ ಪಿಡುಗು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಹಂತದಲ್ಲೇ ಜಾಗೃತರಾಗಿರಬೇಕು. ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಯುವ ಜನತೆ ಮಾದಕ ವಸ್ತುಗಳಿಂದ ದೂರವಿರುವುದು ಇಂದಿನ ಅಗತ್ಯತೆಯಾಗಿದೆ ಎಂದು ದೊಡ್ಡಣಗುಡ್ಡೆ ಡಾ. ಎ.ವಿ. ಬಾಳಿಗ ಮೆಮೋರಿಯಲ್ ಆಸ್ಪತ್ರೆಯ ಖ್ಯಾತ ಮನೋರೋಗ ತಜ್ಞ ಡಾ. ವಿರೂಪಾಕ್ಷ ದೇವರಮನೆ ಹೇಳಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಉಡುಪಿ ತಾಲೂಕು, ಜನಜಾಗೃತಿ ವೇದಿಕೆ ಉಡುಪಿ ತಾಲೂಕು ಅಂಬಲಪಾಡಿ ವಲಯ ಹಾಗೂ ಶ್ಯಾಮಿಲಿ ಪದವಿ ಪೂರ್ವ ಕಾಲೇಜು ಕಿದಿಯೂರು ಇದರ ಜಂಟಿ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ನಡೆದ 'ಸ್ವಾಸ್ತ್ಯ ಸಂಕಲ್ಪ' ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ವಿಸ್ತ್ರತ ಮಾಹಿತಿ ನೀಡಿದರು.
ಶ್ಯಾಮಿಲಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ನಾಗರಾಜ ವೈದ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಜನ ಜಾಗೃತಿ ವೇದಿಕೆಯ ಅಂಬಲಪಾಡಿ ವಲಯಾಧ್ಯಕ್ಷ ಮಹೇಶ್ ಕುಮಾರ್ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜನ ಜಾಗೃತಿ ವೇದಿಕೆಯ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ ಅವರು ದುಶ್ಚಟಗಳ ಕುರಿತು ಜಾಗೃತಿ ಮೂಡಿಸುವ ವಿಚಾರದಲ್ಲಿ ವಿಸ್ತ್ರತ ಮಾಹಿತಿ ನೀಡಿ ವಿದ್ಯಾರ್ಥಿಗಳಿಗೆ 'ಸ್ವಾಸ್ಥ್ಯ ಸಂಕಲ್ಪ ಪ್ರತಿಜ್ಞಾ ವಿಧಿ'ಯನ್ನು ಬೋಧಿಸಿದರು.
ಮುಖ್ಯ ಅತಿಥಿಗಳಾಗಿ ಜನ ಜಾಗೃತಿ ವೇದಿಕೆಯ ಜಿಲ್ಲಾ ಸಮಿತಿ ಸದಸ್ಯ ಶಿವಕುಮಾರ್ ಅಂಬಲಪಾಡಿ, ಒಕ್ಕೂಟದ ಅಧ್ಯಕ್ಷೆ ಸವಿತಾ ಸಂತೋಷ್ ಹಾಗೂ ಶ್ಯಾಮಿಲಿ ಪ.ಪೂ. ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಸೇವಾ ಪ್ರತಿನಿಧಿ ಉಷಾ ಸ್ವಾಗತಿಸಿ, ಒಕ್ಕೂಟದ ಕಾರ್ಯದರ್ಶಿ ಶಕುಂತಲ ವಂದಿಸಿದರು. ಯೋಜನೆಯ ಅಂಬಲಪಾಡಿ ವಲಯ ಮೇಲ್ವಿಚಾರಕಿ ಲಲಿತಾ ಕಾರ್ಯಕ್ರಮ ನಿರೂಪಿಸಿದರು.
