-->
 ಖೋಟಾನೋಟು ಮುದ್ರಣ ಜಾಲ: ಆರೋಪಿ ಮನೆಯಲ್ಲಿದ್ದ ಪ್ರಿಂಟರ್, ದ್ರಾವಣ ಸೇರಿ ಹಲವು ವಸ್ತುಗಳ ವಶ

ಖೋಟಾನೋಟು ಮುದ್ರಣ ಜಾಲ: ಆರೋಪಿ ಮನೆಯಲ್ಲಿದ್ದ ಪ್ರಿಂಟರ್, ದ್ರಾವಣ ಸೇರಿ ಹಲವು ವಸ್ತುಗಳ ವಶ


ಬೆಳ್ತಂಗಡಿಯ ಕಣಿಯೂರು ಗ್ರಾಮದ ಅಡೆಂಜದಲ್ಲಿ ಖೋಟಾ ನೋಟು ಮುದ್ರಿಸುತ್ತಿದ್ದ ಜಾಲವನ್ನು ಭೇದಿಸಿರುವ ಪೊಲೀಸರು, ತಲೆಮರೆಸಿಕೊಂಡಿರುವ ಆರೋಪಿ ಅಬ್ದುಲ್ ಶಕೀಲ್ ಹಾಗೂ ಈಗಾಗಲೇ ಬಂಧನಕ್ಕೊಳಗಾಗಿರುವ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಸಂದೀಪ ಪುಂಡಲೀಕ ಶೋಳಂಬಿ ವಾಸ್ತವ್ಯವಿದ್ದ ಕುವೆಟ್ಟು ಗ್ರಾಮದ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ನ್ಯಾಯಾಲಯದ ಅನುಮತಿ ಪಡೆದು ಬೆಳ್ತಂಗಡಿ ಡಿವೈಎಸ್ಪಿ ನೇತೃತ್ವದಲ್ಲಿ ನಡೆದ ಶೋಧದ ವೇಳೆ ಆರೋಪಿ ಸಂದೀಪ ಪುಂಡಲೀಕ ವಾಸ್ತವ್ಯವಿದ್ದ ಮನೆಯಿಂದ ಪ್ರಿಂಟರ್, ದ್ರಾವಣದ ಬಾಟಲಿ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 
ಜುಲೈ 16ರಂದು ಅಡೆಂಜದಲ್ಲಿರುವ ಇದ್ರೀಸ್ ಎಂಬವರ ಮಾಲೀಕತ್ವದ ಮನೆಯಲ್ಲಿ ಖೋಟಾ ನೋಟು ಮುದ್ರಣ ಜಾಲವನ್ನು ಪೊಲೀಸರು ಪತ್ತೆಹಚ್ಚಿ, ಖೋಟಾ ನೋಟುಗಳು ಹಾಗೂ ನೋಟು ಮುದ್ರಣಕ್ಕೆ ಬಳಸಲಾಗುತ್ತಿದ್ದ ಯಂತ್ರೋಪಕರಣಗಳು ಮತ್ತು ಪರಿಕರಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಬಳಿಕ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದಂತೆ ಹಲವು ಮಹತ್ವದ ಮಾಹಿತಿಗಳು ಬೆಳಕಿಗೆ ಬಂದಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಕಸಬಾ ಗ್ರಾಮದ ಇಬ್ರಾಹೀಂ (60), ಕಾಸರಗೋಡು ಜಿಲ್ಲೆಯ ಚಂಗುಲ ಗ್ರಾಮದ ಶರೀಫ್ (51), ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಸಂದೀಪ ಪುಂಡಲೀಕ ಶೋಳಂಬಿ (30), ಕಾಸರಗೋಡು ಜಿಲ್ಲೆಯ ಆಮೂರು ಗ್ರಾಮದ ನಬಾಸ್ (37), ಒಳಮೊಗ್ರು ಗ್ರಾಮದ ಸಲ್ಮಾನ್ ಫಾರೀಸ್ (25), ಉರುವಾಲು ಗ್ರಾಮದ ಸಿರಾಜುದ್ದೀನ್ (34) ಹಾಗೂ ಪುತ್ತಿಲ ಗ್ರಾಮದ ಇರ್ಷಾದ್ (31) ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆರಂಭದಲ್ಲಿ ಇಬ್ರಾಹೀಂ, ಸಂದೀಪ ಪುಂಡಲೀಕ ಶೋಳಂಬಿ, ಸಿರಾಜುದ್ದೀನ್ ಹಾಗೂ ಇರ್ಷಾದ್ ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿತ್ತು. ಉಳಿದ ಆರೋಪಿಗಳಾದ ನಬಾಸ್, ಸಲ್ಮಾನ್ ಫಾರೀಸ್ ಹಾಗೂ ಶರೀಫ್ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಬಳಿಕ ಪೊಲೀಸ್ ಕಸ್ಟಡಿಯಲ್ಲಿದ್ದ ನಾಲ್ವರನ್ನು ಸಹ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಪ್ರಕರಣದ ಪ್ರಮುಖ ಆರೋಪಿ ಅಬ್ದುಲ್ ಶಕೀಲ್ ಇನ್ನೂ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ. 

Ads on article

Advertise in articles 1

advertising articles 2

Advertise under the article