ಕಾಪು: ಟೈಮಿಂಗ್ ವಿಚಾರಕ್ಕೆ ಖಾಸಗಿ ಬಸ್ ಸಿಬ್ಬಂದಿಗಳ ಘರ್ಷಣೆ– ನಾಲ್ವರ ಬಂಧನ
Tuesday, July 28, 2026
ಬಸ್ ಟೈಮಿಂಗ್ ವಿಚಾರಕ್ಕೆ ಸಂಬಂಧಿಸಿ ಕಾಪು ಪೇಟೆಯಲ್ಲಿ ಎರಡು ಖಾಸಗಿ ಬಸ್‌ಗಳ ಸಿಬ್ಬಂದಿಗಳ ನಡುವೆ ನಡೆದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಬಸ್ ಚಾಲಕರಾದ ರಮೇಶ್, ಅಭಿಷೇಕ್, ನಿರ್ವಾಹಕರಾದ ವಿಜಯಕುಮಾರ್ ಮತ್ತು ಹರೀಶ್ ಬಿ. ಹೆಗ್ಡೆ ಎಂದು ಗುರುತಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಎರಡೂ ಖಾಸಗಿ ಬಸ್‌ಗಳನ್ನು ವಶಪಡಿಸಿಕೊಂಡಿದ್ದು, ಪ್ರಕರಣ ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಕಾಪು ಪೇಟೆಯಲ್ಲಿ ಬಸ್ ಟೈಮಿಂಗ್ ವಿಚಾರವಾಗಿ ಎರಡು ಖಾಸಗಿ ಬಸ್‌ಗಳ ಚಾಲಕರು ಹಾಗೂ ನಿರ್ವಾಹಕರ ನಡುವೆ ಮಾತಿನ ಚಕಮಕಿ ನಡೆದು ಬಳಿಕ ಅದು ಘರ್ಷಣೆಗೆ ತಿರುಗಿತ್ತು. ಮಾಹಿತಿ ಪಡೆದ ಕಾಪು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.