-->
 ಬೈಂದೂರಿನಲ್ಲಿ ಬೀಸಿದ ಭೀಕರ ಸುಂಟರಗಾಳಿ: ಕೃಷಿತೋಟಗಳಿಗೆ ಹಾನಿ

ಬೈಂದೂರಿನಲ್ಲಿ ಬೀಸಿದ ಭೀಕರ ಸುಂಟರಗಾಳಿ: ಕೃಷಿತೋಟಗಳಿಗೆ ಹಾನಿ


ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಆಜ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಡ್ನಾಳಿ, ಹಕ್ಲ್ ಮನೆ ಹಾಗೂ ಮಕ್ಕಿಮನೆ ಪ್ರದೇಶಗಳಲ್ಲಿ ಶುಕ್ರವಾರ ಮುಂಜಾನೆ ಬೀಸಿದ ಭೀಕರ ಸುಂಟರಗಾಳಿಗೆ ಅಪಾರ ಪ್ರಮಾಣದ ಬೆಳೆ ಹಾಗೂ ಆಸ್ತಿ ಹಾನಿಯಾಗಿದೆ. ಕೆಲವೇ ಕ್ಷಣಗಳ ಕಾಲ ಬೀಸಿದ ಗಾಳಿಯ ಅಬ್ಬರಕ್ಕೆ 150ಕ್ಕೂ ಹೆಚ್ಚು ಅಡಿಕೆ ಮರಗಳು ನೆಲಸಮವಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.


ಬೆಳಗ್ಗೆ ಸುಮಾರು 6 ಗಂಟೆ ಸುಮಾರಿಗೆ ಏಕಾಏಕಿ ಅಪ್ಪಳಿಸಿದ ಸುಂಟರಗಾಳಿಯು ಅಡಿಕೆ ತೋಟಗಳಿಗೆ ನುಗ್ಗಿ ಅಬ್ಬರಿಸಿದೆ. ಬೃಹತ್ ಗಾತ್ರದ ಮರಗಳು ಬೇರು ಸಮೇತ ಉರುಳಿದ್ದು, ಅಡಿಕೆ, ತೆಂಗು ಹಾಗೂ ಬಾಳೆ ಬೆಳೆಗಳು ವ್ಯಾಪಕವಾಗಿ ಹಾನಿಗೊಳಗಾಗಿವೆ. ಹಲವು ಮನೆಗಳ ಹೆಂಚುಗಳು ಹಾರಿ ಹೋಗಿದ್ದು, ವಿದ್ಯುತ್ ಕಂಬಗಳು ಹಾಗೂ ವಿದ್ಯುತ್ ಸಂಪರ್ಕ ವ್ಯವಸ್ಥೆಯೂ ಹಾನಿಗೊಳಗಾಗಿದೆ.


ಸುಂಟರಗಾಳಿಯ ತೀವ್ರತೆಗೆ ಒಂದು ಕರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಮನೆ, ತೋಟ ಹಾಗೂ ಜೀವನೋಪಾಯದ ಪ್ರಮುಖ ಆಧಾರವಾಗಿದ್ದ ಬೆಳೆಗಳನ್ನು ಕಳೆದುಕೊಂಡ ರೈತರು ಕಣ್ಣೀರಿನಲ್ಲಿ ಮುಳುಗಿದ್ದು, ಸರ್ಕಾರದಿಂದ ತಕ್ಷಣ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಸಂತ್ರಸ್ತ ರೈತರೊಂದಿಗೆ ಮಾತುಕತೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿ ಧೈರ್ಯ ತುಂಬಿದರು.

ಈ ವೇಳೆ ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ತಕ್ಷಣವೇ ಹಾನಿಯ ಸಮಗ್ರ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ ಅವರು, ಸರ್ಕಾರದ ನಿಯಮಾನುಸಾರ ಅರ್ಹ ರೈತರಿಗೆ ಶೀಘ್ರ ಪರಿಹಾರ ದೊರಕುವಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಸ್ಥಳೀಯರು ಹಾಗೂ ರೈತರು ಕೂಡ ಸರ್ಕಾರವು ಶೀಘ್ರವೇ ಹಾನಿ ಮೌಲ್ಯಮಾಪನ ಪೂರ್ಣಗೊಳಿಸಿ ಸೂಕ್ತ ಪರಿಹಾರ ಘೋಷಿಸುವಂತೆ ಒತ್ತಾಯಿಸಿದ್ದಾರೆ.

Ads on article

Advertise in articles 1

advertising articles 2

Advertise under the article