ಅಲೆವೂರು ಶಾಂತಿನಿಕೇತನ ಶಾಲೆಯಲ್ಲಿ ಮಾದಕ ವಸ್ತು ಜಾಗೃತಿ ಕಾರ್ಯಕ್ರಮ
Friday, July 31, 2026
ಅಲೆವೂರಿನ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯ ಇಂಟರ್ಯಾಕ್ಟ್ ಕ್ಲಬ್ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಮಾದಕ ವಸ್ತು ಜಾಗೃತಿ ಮತ್ತು ತರಬೇತಿ ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ನಡೆಯಿತು.
ರೋಟರಿ ಐಸಿರಿ ಪರ್ಕಳ ಪ್ರಾಯೋಜಕತ್ವದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಐಸಿರಿ ಪರ್ಕಳದ ಅಧ್ಯಕ್ಷ ರೊ. ಸಂದೀಪ್ ಕುಮಾರ್ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ಉತ್ತಮ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರೋಟರಿ ಜಿಲ್ಲಾ 3182ರ ಸಹಾಯಕ ಗವರ್ನರ್ ಹೇಮಂತ್ ಯು. ಕಾಂತ್ ಅವರು “ಮಾನವನಾಗುವೆಯಾ ಇಲ್ಲ ದಾನವನಾಗುವೆಯ...” ಎಂಬ ಕನ್ನಡ ಗೀತೆಯ ಸಾಲನ್ನು ಉಲ್ಲೇಖಿಸಿ, ಉತ್ತಮ ಸಂಸ್ಕಾರ, ಉತ್ತಮ ವಿದ್ಯಾಭ್ಯಾಸ ಮತ್ತು ಉತ್ತಮ ಜೀವನ ಮೌಲ್ಯಗಳು ಮಾನವೀಯ ಗುಣಗಳನ್ನು ಬೆಳೆಸುತ್ತವೆ ಎಂದರು. ಯುವಜನತೆ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಉಪಸ್ಥಿತರಿದ್ದ ಡಾ. ಎ. ವಿ. ಬಾಳಿಗಾ ಆಸ್ಪತ್ರೆಯ ಮನೋವೈದ್ಯ ಡಾ. ಮಾನಸ್ ಇ.ಆರ್. ಅವರು ಮಾದಕ ವಸ್ತು ಸೇವನೆಯ ದುಷ್ಪರಿಣಾಮಗಳು, ಮಾನಸಿಕ ಆರೋಗ್ಯದ ಮೇಲೆ ಅದರ ಪರಿಣಾಮ ಹಾಗೂ ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರಬೇಕಾದ ವಿಷಯಗಳ ಕುರಿತು ಮಾಹಿತಿ ನೀಡಿದರು.
ಶಾಂತಿನಿಕೇತನ ಶಾಲೆಯ ವ್ಯವಸ್ಥಾಪಕ ನಿರ್ದೇಶಕ ಅಲೆವೂರು ದಿನೇಶ್ ಕಿಣಿ, ಪ್ರಾಂಶುಪಾಲೆ ರೂಪಾ ಡಿ. ಕಿಣಿ, ರೋಟರಿ ಐಸಿರಿ ಪರ್ಕಳದ ಕಾರ್ಯದರ್ಶಿ ರಾಜೇಶ್ ಡಿ. ಶೆಣೈ, ಯುವ ಸೇವಾ ನಿರ್ದೇಶಕ ಕೃಷ್ಣಪ್ಪ, ಇಂಟರ್ಯಾಕ್ಟ್ ಚೇರ್ಮನ್ ವೆಂಕಟೇಶ್ ಭಟ್ ಹಾಗೂ ಇಂಟರ್ಯಾಕ್ಟ್ ಸಹ ಸಂಯೋಜಕಿ ಸುಮನಾ ಬಿ.ಆರ್. ಶಾಲಾ ಇಂಟರ್ಯಾಕ್ಟ್ ಅಧ್ಯಕ್ಷೆ ಮೋಕ್ಷಾ ಎಸ್. ಪಿ., ಕಾರ್ಯದರ್ಶಿ ಧೃತಿ ಸತೀಶ್ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವೆಂಕಟೇಶ್ ಭಟ್ ನಿರೂಪಿಸಿದರು. ರಾಜೇಶ್ ಡಿ. ಶೆಣೈ ವಂದಿಸಿದರು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದರು.



