ಉಡುಪಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸರ್ವರ್ ಸಮಸ್ಯೆ: ಶೀಘ್ರ ಪರಿಹಾರಕ್ಕೆ ಶಾಸಕ ಯಶ್ಪಾಲ್ ಸುವರ್ಣ ಒತ್ತಾಯ
ಉಡುಪಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಕಳೆದ ಮೂರು ದಿನಗಳಿಂದ ಮುಂದುವರಿದಿರುವ ಸರ್ವರ್ ಸಮಸ್ಯೆಯಿಂದ ನೋಂದಣಿ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿದ್ದು, ನೂರಾರು ಸಾರ್ವಜನಿಕರು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ದೂರಿನ ಮೇರೆಗೆ ಶಾಸಕ ಯಶ್ ಪಾಲ್ ಸುವರ್ಣ ಶುಕ್ರವಾರ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಯ ಮಾಹಿತಿ ಪಡೆದರು.
ಸರ್ವರ್ ತಾಂತ್ರಿಕ ದೋಷದಿಂದಾಗಿ ಶುಕ್ರವಾರ ಬೆಳಗ್ಗೆಯಿಂದ ಸಂಜೆ 4.30ರವರೆಗೆ ಒಂದು ಕಡತವೂ ನೋಂದಣಿಯಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು. ಪರವೂರಿನಿಂದ ಆಗಮಿಸಿದ್ದ ನಾಗರಿಕರು, ಮಹಿಳೆಯರು ಹಾಗೂ ವಯೋವೃದ್ಧರು ಸೇರಿದಂತೆ ಹಲವರು ತೀವ್ರ ತೊಂದರೆ ಅನುಭವಿಸಿದರು.
ಈ ಸಂದರ್ಭದಲ್ಲಿ ಶಾಸಕ ಯಶ್ ಪಾಲ್ ಸುವರ್ಣ ಅವರು ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ಕಮಿಷನರ್ ಮುಲ್ಲೈ ಮುಗಿಲನ್ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ಸರ್ವರ್ ಸಮಸ್ಯೆಯನ್ನು ತಕ್ಷಣ ಪರಿಹರಿಸುವಂತೆ ಮನವಿ ಮಾಡಿದರು. ಜೊತೆಗೆ, ಶುಕ್ರವಾರ ನಿಗದಿಯಾಗಿದ್ದ ಕಡತಗಳ ನೋಂದಣಿಯನ್ನು ರಾತ್ರಿ ವೇಳೆಯಾದರೂ ಪೂರ್ಣಗೊಳಿಸಲು ಹಾಗೂ ಬಾಕಿ ಉಳಿದ ಕಡತಗಳ ನೋಂದಣಿಗೆ ಭಾನುವಾರ ವಿಶೇಷ ಅವಕಾಶ ಕಲ್ಪಿಸುವಂತೆ ಕೋರಿದರು.
ಇದೇ ವಿಷಯವನ್ನು ಉಡುಪಿ ಜಿಲ್ಲಾಧಿಕಾರಿಗಳ ಗಮನಕ್ಕೂ ತಂದ ಶಾಸಕ, ರಾಜ್ಯ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಆದಾಯ ತರುವ ನೋಂದಣಿ ಕಚೇರಿಯಲ್ಲಿ ಪದೇಪದೇ ಸರ್ವರ್ ಸಮಸ್ಯೆ ಉಂಟಾಗುತ್ತಿರುವುದು ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ ಎಂದು ತಿಳಿಸಿ, ಶಾಶ್ವತ ಪರಿಹಾರಕ್ಕಾಗಿ ವಿಶೇಷ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ರಾಜ್ಯ ಸರ್ಕಾರ ಉನ್ನತ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸಾರ್ವಜನಿಕರಿಗೆ ನಿರಂತರ ಹಾಗೂ ಗುಣಮಟ್ಟದ ಸೇವೆ ಒದಗಿಸಬೇಕು. ರಾಜ್ಯಾದ್ಯಂತ ನೋಂದಣಿ ಕಚೇರಿಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಸರ್ವರ್ ಸಮಸ್ಯೆಯನ್ನು ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಿ, ಶಾಶ್ವತ ಪರಿಹಾರಕ್ಕೆ ಸರ್ಕಾರವನ್ನು ಒತ್ತಾಯಿಸುವುದಾಗಿ ಶಾಸಕ ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ.