ಕಾರಿಗೆ ಟೆಂಪೋ ಡಿಕ್ಕಿ: ಹಿರಿಯ ಪತ್ರಕರ್ತ ಬಾಲಕೃಷ್ಣ ಭೀಮಗುಳಿ ಪ್ರಾಣಾಪಾಯದಿಂದ ಪಾರು
Friday, July 24, 2026
ಅತಿವೇಗದಲ್ಲಿ ಬಂದ ಟಾಟಾ ಏಸ್ ಟೆಂಪೋ ಕಾರಿಗೆ ಡಿಕ್ಕಿ ಹೊಡೆದಿದ್ದು, ಹಿರಿಯ ಪತ್ರಕರ್ತ ಬಾಲಕೃಷ್ಣ ಭೀಮಗುಳಿ ಅವರು ಪ್ರಾಣಾಪಾಯದಿಂದ ಪಾರಾದ ಘಟನೆ ಕಾರ್ಕಳ–ನಕ್ರೆ ರಸ್ತೆಯ ಪರಪ್ಪು ಸೇತುವೆ ಸಮೀಪ ನಡೆದಿದೆ.
ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕ್ರಿಯೇಟಿವ್ ಕಾಲೇಜಿನಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಪತ್ರಕರ್ತ ಬಿಪಿನ್ ಚಂದ್ರಲಾಲ್ ನಕ್ರೆ ಅವರನ್ನು ಅವರ ನಿವಾಸಕ್ಕೆ ಬಿಟ್ಟು ಭೀಮಗುಳಿ ಅವರು ಕಾರ್ಕಳಕ್ಕೆ ವಾಪಸಾಗುತ್ತಿದ್ದರು. ಈ ವೇಳೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿನ ಸಮೀಪ ಎದುರು ದಿಕ್ಕಿನಿಂದ ಅತಿವೇಗದಲ್ಲಿ ಬಂದ ಶ್ರೀದೇವಿ ಫರ್ನಿಚರ್ಸ್‌ಗೆ ಸೇರಿದ ಟೆಂಪೋ ನಿಯಂತ್ರಣ ತಪ್ಪಿ ಅವರ ಕಾರಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ತೀವ್ರತೆಗೆ ಭೀಮಗುಳಿ ಅವರ ಕಾರು ರಸ್ತೆ ಬದಿಯ ಕಮರಿಗೆ ಜಾರಿದ್ದು, ಚಾಲಕನ ಬದಿಯ ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಟೆಂಪೋಗೂ ಹಾನಿಯಾಗಿದೆ. ಅದೃಷ್ಟವಶಾತ್ ಎರಡೂ ವಾಹನಗಳಲ್ಲಿದ್ದವರು ಗಂಭೀರ ಗಾಯಗಳಿಂದ ಪಾರಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಅಪಘಾತದ ಪರಿಣಾಮ ಕೆಲಕಾಲ ಕಾರ್ಕಳ–ನಕ್ರೆ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸ್ಥಳೀಯರು ಹಾಗೂ ಸಾರ್ವಜನಿಕರ ನೆರವಿನಿಂದ ವಾಹನಗಳನ್ನು ತೆರವುಗೊಳಿಸಿ ಸಂಚಾರವನ್ನು ಪುನಃ ಆರಂಭಿಸಲಾಯಿತು.
.jpeg)