-->
 ನಂದಿನಿ ತುಪ್ಪ, ಬೆಣ್ಣೆ ಬೆಲೆ ಏರಿಕೆ: ಗ್ರಾಹಕರಿಗೆ ಇಂದಿನಿಂದ ಹೆಚ್ಚುವರಿ ಹೊರೆ

ನಂದಿನಿ ತುಪ್ಪ, ಬೆಣ್ಣೆ ಬೆಲೆ ಏರಿಕೆ: ಗ್ರಾಹಕರಿಗೆ ಇಂದಿನಿಂದ ಹೆಚ್ಚುವರಿ ಹೊರೆ


ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ತನ್ನ ಜನಪ್ರಿಯ ನಂದಿನಿ ಬ್ರಾಂಡ್‌ನ ತುಪ್ಪ ಮತ್ತು ಬೆಣ್ಣೆಯ ದರವನ್ನು ಪರಿಷ್ಕರಿಸಿದ್ದು, ಹೊಸ ಬೆಲೆಗಳು ಇಂದಿನಿಂದ ರಾಜ್ಯಾದ್ಯಂತ ಜಾರಿಗೆ ಬಂದಿವೆ. ಈ ಬೆಲೆ ಏರಿಕೆಯಿಂದ ಗೃಹ ಬಳಕೆದಾರರ ಜೊತೆಗೆ ಹೋಟೆಲ್, ಬೇಕರಿ ಹಾಗೂ ಸಿಹಿತಿಂಡಿ ತಯಾರಿಕಾ ವಲಯಕ್ಕೂ ಹೆಚ್ಚುವರಿ ವೆಚ್ಚದ ಹೊರೆ ಬೀಳಲಿದೆ.

ಕೆಎಂಎಫ್ ವ್ಯಾಪ್ತಿಯ ಬಮೂಲ್ ಹೊರಡಿಸಿರುವ ಆದೇಶದ ಪ್ರಕಾರ, ಒಂದು ಲೀಟರ್ ನಂದಿನಿ ತುಪ್ಪದ ಸ್ಯಾಚೆಟ್ ದರವನ್ನು 700ರಿಂದ 715 ರೂಪಾಯಿಗೆ ಹೆಚ್ಚಿಸಲಾಗಿದೆ. ಅಂದರೆ, ತುಪ್ಪದ ದರದಲ್ಲಿ ಪ್ರತಿ ಕೆಜಿಗೆ 15 ರೂಪಾಯಿ ಏರಿಕೆ ಮಾಡಲಾಗಿದೆ. 

 ಒಂದು ಕೆಜಿ ನಂದಿನಿ ಬೆಣ್ಣೆಯ ದರವನ್ನು 610ರಿಂದ 660 ರೂಪಾಯಿಗೆ ಹೆಚ್ಚಿಸಲಾಗಿದ್ದು, ಪ್ರತಿ ಕೆಜಿಗೆ 50 ರೂಪಾಯಿ ಏರಿಕೆಯಾಗಿದೆ. ಪರಿಷ್ಕೃತ ದರವು ರಾಜ್ಯದ ಎಲ್ಲಾ ಕೆಎಂಎಫ್ ಹಾಗೂ ಬಮೂಲ್ ಮಾರಾಟ ಮಳಿಗೆಗಳಲ್ಲಿ ಇಂದಿನಿಂದಲೇ ಅನ್ವಯವಾಗಲಿದೆ. ನಂದಿನಿ ಬ್ರಾಂಡ್‌ನ ತುಪ್ಪ ಮತ್ತು ಬೆಣ್ಣೆ ರಾಜ್ಯದ ಜನಪ್ರಿಯ ಹಾಲಿನ ಉತ್ಪನ್ನಗಳಾಗಿರುವುದರಿಂದ, ಈ ದಿಢೀರ್ ಬೆಲೆ ಏರಿಕೆ ಗ್ರಾಹಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಜನರಿಗೆ ಈ ನಿರ್ಧಾರ ಮತ್ತಷ್ಟು ಹೊರೆ ತಂದಂತಾಗಿದೆ. 

ಹೋಟೆಲ್, ಬೇಕರಿ ಹಾಗೂ ಸಿಹಿತಿಂಡಿ ತಯಾರಿಕಾ ಉದ್ಯಮಗಳಲ್ಲಿ ತುಪ್ಪ ಮತ್ತು ಬೆಣ್ಣೆಯ ಬಳಕೆ ಹೆಚ್ಚಿರುವುದರಿಂದ, ಉತ್ಪಾದನಾ ವೆಚ್ಚವೂ ಏರಿಕೆಯಾಗುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ಕೆಲವು ಆಹಾರ ಪದಾರ್ಥಗಳ ಬೆಲೆಗಳಲ್ಲೂ ಮುಂದಿನ ದಿನಗಳಲ್ಲಿ ಏರಿಕೆ ಕಾಣಬಹುದೆಂಬ ಆತಂಕ ವ್ಯಕ್ತವಾಗಿದೆ. ಕೆಎಂಎಫ್‌ನ ಈ ಹೊಸ ದರ ಪರಿಷ್ಕರಣೆಯು ರಾಜ್ಯಾದ್ಯಂತ ಇಂದಿನಿಂದಲೇ ಜಾರಿಯಲ್ಲಿದ್ದು, ಗ್ರಾಹಕರು ಪರಿಷ್ಕೃತ ದರದಂತೆ ಉತ್ಪನ್ನಗಳನ್ನು ಖರೀದಿಸಬೇಕಾಗಿದೆ.

Ads on article

Advertise in articles 1

advertising articles 2

Advertise under the article