ಟಾಟಾ ಏಸ್ ವಾಹನ ಪಲ್ಟಿ: 11 ವರ್ಷದ ಬಾಲಕನಿಗೆ ಗಾಯ
Friday, July 24, 2026
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸೇಡಿಯಾಪು ಸಮೀಪದ ಕಾಪು ಎಂಬಲ್ಲಿ ಟಾಟಾ ಏಸ್ ವಾಹನ ರಸ್ತೆ ಬದಿಗೆ ಪಲ್ಟಿಯಾಗಿ 11 ವರ್ಷದ ಬಾಲಕನೊಬ್ಬ ಗಾಯಗೊಂಡ ಘಟನೆ ನಡೆದಿದೆ.
ಕೊಯಿಲದ ಸನ್ಯಾಸಿಗುಡ್ಡೆ ನಿವಾಸಿ ಅಬ್ದುಲ್ ಮಜೀದ್ ಅವರು ತಮ್ಮ ಟಾಟಾ ಏಸ್ ವಾಹನದಲ್ಲಿ ಉಪ್ಪಿನಂಗಡಿಯಿಂದ ಪುತ್ತೂರು ಕಡೆಗೆ ಸಂಚರಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ರಸ್ತೆ ಅಂಚಿನ ಚಕ್ರ ತಗ್ಗಿದ ಭಾಗಕ್ಕೆ ಇಳಿದ ಪರಿಣಾಮ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎನ್ನಲಾಗಿದೆ.
ಅಪಘಾತದಲ್ಲಿ ವಾಹನದಲ್ಲಿದ್ದ ಅವರ ಪುತ್ರ ಮಹಮ್ಮದ್ ಅಮೀನ್ (11) ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ನಡೆದ ಸ್ಥಳದಲ್ಲಿ ಇತ್ತೀಚೆಗೆ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆದಿದ್ದರೂ, ರಸ್ತೆ ಅಂಚಿನಲ್ಲಿ ಮಣ್ಣು ತುಂಬಿಸಿ ಸಮತಟ್ಟು ಮಾಡದ ಕಾರಣ ತಗ್ಗು ನಿರ್ಮಾಣಗೊಂಡಿದೆ. ಅಲ್ಲದೆ, ಡಿವೈಡರ್ ಕಾಮಗಾರಿಯೂ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ವಾಹನ ಚಾಲಕರು ಸ್ವಲ್ಪ ಎಚ್ಚರ ತಪ್ಪಿದರೂ ರಸ್ತೆ ಬದಿಗೆ ವಾಹನ ಇಳಿದು ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.