-->
ಸಾಲಿಗ್ರಾಮದಲ್ಲಿ  15 ಅಡಿ ಅಂಡರ್‌ಪಾಸ್‌ ನಿರ್ಮಾಣಕ್ಕೆ ನಿರ್ಧಾರ

ಸಾಲಿಗ್ರಾಮದಲ್ಲಿ 15 ಅಡಿ ಅಂಡರ್‌ಪಾಸ್‌ ನಿರ್ಮಾಣಕ್ಕೆ ನಿರ್ಧಾರ


ಉಡುಪಿ ಜಿಲ್ಲೆಯ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಶ್ರೀ ಗುರು ನರಸಿಂಹ ಹಾಗೂ ಶ್ರೀ ಆಂಜನೇಯ ದೇವಳದ ಮುಂಭಾಗದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿರಂತರವಾಗಿ ಸಂಭವಿಸುತ್ತಿರುವ ಅಪಘಾತಗಳಿಗೆ ಕಡಿವಾಣ ಹಾಕುವ ಹಾಗೂ ಭಕ್ತರ ಸುರಕ್ಷಿತ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ 15 ಅಡಿ ಅಗಲದ ಅಂಡರ್‌ಪಾಸ್‌ ನಿರ್ಮಿಸಲು ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ.


ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು, ಡಿಪಿಆರ್‌ ಸಿದ್ಧಪಡಿಸುತ್ತಿರುವ ಧ್ರುವ ಸಂಸ್ಥೆಯ ಎಂಜಿನಿಯರ್‌ಗಳು ಹಾಗೂ ದೇವಳದ ಆಡಳಿತ ಮಂಡಳಿ ಸದಸ್ಯರೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಚರ್ಚಿಸಿದರು.


ಸಾಲಿಗ್ರಾಮದ ರಥಬೀದಿ ರಾಷ್ಟ್ರೀಯ ಹೆದ್ದಾರಿ 66ನ್ನು ಹಾದುಹೋಗಿರುವುದರಿಂದ ದೇವಳಕ್ಕೆ ಆಗಮಿಸುವ ಭಕ್ತರು ಹೆದ್ದಾರಿ ದಾಟಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಪ್ರದೇಶದಲ್ಲಿ ಪದೇಪದೇ ಅಪಘಾತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷಿತ ಸಂಚಾರಕ್ಕಾಗಿ ಅಂಡರ್‌ಪಾಸ್‌ ನಿರ್ಮಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿತ್ತು.

ಸ್ಥಳ ಪರಿಶೀಲನೆ ಬಳಿಕ ಮಾತನಾಡಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಿರೂರಿನಿಂದ ತಲಪಾಡಿವರೆಗೆ ರಾಷ್ಟ್ರೀಯ ಹೆದ್ದಾರಿ 66ರ ಅಭಿವೃದ್ಧಿಗೆ ಡಿಪಿಆರ್‌ ಸಿದ್ಧಪಡಿಸಲಾಗುತ್ತಿದೆ. ಅಪಘಾತ ಸಂಭವಿಸುವ ಸ್ಥಳಗಳು, ಅಂಡರ್‌ಪಾಸ್‌ ಹಾಗೂ ಮೇಲ್ಸೇತುವೆ ಅಗತ್ಯವಿರುವ ಪ್ರದೇಶಗಳನ್ನು ಗುರುತಿಸಿ ಸಮಗ್ರ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ಕುಂದಾಪುರದಿಂದ ಯಜಮಾಡಿ ಟೋಲ್‌ಗೇಟ್‌ವರೆಗೆ ಪ್ರತಿದಿನ ಆರರಿಂದ ಏಳು ಅಪಘಾತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಅಪಘಾತರಹಿತ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಸಾಲಿಗ್ರಾಮ ದೇವಳದ ಭಕ್ತರ ಸುರಕ್ಷಿತ ಸಂಚಾರಕ್ಕಾಗಿ ಅಂಡರ್‌ಪಾಸ್‌ ನಿರ್ಮಾಣದ ಬೇಡಿಕೆ ಬಹುಕಾಲದಿಂದ ಇತ್ತು. ಇದೀಗ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಹಾಗೂ ಡಿಪಿಆರ್‌ ಸಂಸ್ಥೆಯ ಎಂಜಿನಿಯರ್‌ಗಳೊಂದಿಗೆ ಸ್ಥಳದಲ್ಲಿಯೇ ಚರ್ಚಿಸಿ 15 ಅಡಿ ಅಗಲದ ಅಂಡರ್‌ಪಾಸ್‌ ನಿರ್ಮಾಣಕ್ಕೆ ಒಮ್ಮತ ಮೂಡಿದೆ ಎಂದು ಹೇಳಿದರು.

ಪ್ರಸ್ತುತ ಸಿದ್ಧಪಡಿಸಲಾಗುತ್ತಿರುವ ಡಿಪಿಆರ್‌ನಲ್ಲಿ ಈ ಯೋಜನೆಯನ್ನು ಸೇರ್ಪಡೆಗೊಳಿಸಿ ಆದಷ್ಟು ಶೀಘ್ರ ಕಾಮಗಾರಿ ಆರಂಭಿಸುವ ಉದ್ದೇಶವಿದೆ. ಅಂಡರ್‌ಪಾಸ್‌ ನಿರ್ಮಾಣವಾದರೆ ದೇವಳದ ಭಕ್ತರು ಹೆದ್ದಾರಿಯನ್ನು ಸುರಕ್ಷಿತವಾಗಿ ದಾಟಲು ಅನುಕೂಲವಾಗಲಿದ್ದು, ಅಪಘಾತಗಳ ಪ್ರಮಾಣವೂ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಸಂಸದರು ಹೇಳಿದರು.

ಈ ಸಂದರ್ಭದಲ್ಲಿ ಕುಂದಾಪುರ ಶಾಸಕ ಕಿರಣ್‌ ಕೊಡ್ಗಿ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು, ಧ್ರುವ ಸಂಸ್ಥೆಯ ಎಂಜಿನಿಯರ್‌ಗಳು, ದೇವಳದ ಆಡಳಿತ ಮಂಡಳಿ ಸದಸ್ಯರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article