8 ಅಡಿ 10 ಇಂಚಿನ ಕೂದಲಿನೊಂದಿಗೆ ವಿಶ್ವದಾಖಲೆ ಬರೆದ ಉತ್ತರಾಖಂಡ್ ಮಹಿಳೆ
Wednesday, August 12, 2026
ಉದ್ದನೆಯ ಕೂದಲು ಎಂದರೆ ಕೆಲವರಿಗೆ ಸೌಂದರ್ಯದ ಸಂಕೇತ. ಇನ್ನು ಕೆಲವರಿಗೆ ಅದು ವೈಯಕ್ತಿಕ ಶೈಲಿ. ಆದರೆ ರೇಣು ಧರಿಯಾಲ್ ಅವರಿಗೆ ಅದೇ ಕೂದಲು ಇದೀಗ ವಿಶ್ವದಾಖಲೆಯ ಹೆಗ್ಗಳಿಕೆಯನ್ನು ತಂದುಕೊಟ್ಟಿದೆ. ಸುಮಾರು ಒಂದು ದಶಕದ ತಾಳ್ಮೆ, ನಿರಂತರ ಆರೈಕೆ ಮತ್ತು ಕೂದಲನ್ನು ಕತ್ತರಿಸದ ದೃಢಸಂಕಲ್ಪದ ಫಲವಾಗಿ ರೇಣು ಅವರು ಅತಿ ಉದ್ದನೆಯ ತಲೆಕೂದಲಿನ Guinness World Records ದಾಖಲೆಯನ್ನು ನಿರ್ಮಿಸಿದ್ದಾರೆ.
ಉತ್ತರಾಖಂಡ್ ನ ರೇಣು ಧರಿಯಾಲ್ ಅವರ ಕೂದಲಿನ ಉದ್ದ 8 ಅಡಿ 10 ಇಂಚು, ಅಂದರೆ 271.50 ಸೆಂಟಿಮೀಟರ್‌ಗಳು ಎಂದು ಹೇಳಲಾಗಿದೆ. ಈ ಹಿಂದೆ ಉಕ್ರೇನ್‌ನ ಅಲಿಯಾ ನಾಸಿರೋವಾ ಹೊಂದಿದ್ದ 257.33 ಸೆಂಟಿಮೀಟರ್‌ಗಳ ದಾಖಲೆಯನ್ನು ರೇಣು ಹಿಂದಿಕ್ಕಿದ್ದಾರೆ.
ರೇಣು ಧರಿಯಾಲ್ ಅವರ ಈ ಸಾಧನೆಯ ಹಿಂದೆ ಒಂದೇ ದಿನದ ಪ್ರಯತ್ನವಿಲ್ಲ. 2015ರಿಂದ ಅವರು ತಮ್ಮ ಕೂದಲನ್ನು ಕತ್ತರಿಸುವುದನ್ನು ನಿಲ್ಲಿಸಿದ್ದಾರೆ. ವರ್ಷದಿಂದ ವರ್ಷಕ್ಕೆ ಕೂದಲು ಬೆಳೆಯುತ್ತಲೇ ಹೋಯಿತು. ಆದರೆ ಕೂದಲನ್ನು ಉದ್ದವಾಗಿ ಬೆಳೆಸುವುದು ಮಾತ್ರ ಸಾಕಾಗುವುದಿಲ್ಲ; ಅದನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳುವುದು, ಜಟೆಯಾಗದಂತೆ ನೋಡಿಕೊಳ್ಳುವುದು ಮತ್ತು ದೈನಂದಿನ ಜೀವನದಲ್ಲಿ ನಿರ್ವಹಿಸುವುದು ದೊಡ್ಡ ಸವಾಲು.
ಆ ಸವಾಲನ್ನು ಎದುರಿಸುತ್ತಾ ರೇಣು ತಮ್ಮ ಕೂದಲಿನ ಆರೈಕೆಯನ್ನು ಜೀವನಶೈಲಿಯ ಒಂದು ಭಾಗವನ್ನಾಗಿ ಮಾಡಿಕೊಂಡಿದ್ದಾರೆ. ವಿಶ್ವದಾಖಲೆಯ ಜೊತೆಗೆ ರೇಣು ಧರಿಯಾಲ್ ಸಾಮಾಜಿಕ ಮಾಧ್ಯಮಗಳಲ್ಲಿಯೂ ಸಕ್ರಿಯರಾಗಿದ್ದಾರೆ. ತಮ್ಮ ಕೂದಲಿನ ಅನುಭವಗಳನ್ನು ಮಾತ್ರವಲ್ಲದೆ ಜೀವನಶೈಲಿ ಮತ್ತು ಕೂದಲಿನ ಆರೈಕೆಯ ಕುರಿತ ಸಲಹೆಗಳನ್ನು ತಮ್ಮ ಪ್ರೇಕ್ಷಕರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.
