ರಾಜೀನಾಮೆ ಹಿಂಪಡೆದ ಶಾಸಕ ಯಶವಂತರಾಯಗೌಡ ಪಾಟೀಲ
Wednesday, August 05, 2026
ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಸಚಿವ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ದೊರೆಯದ ಹಿನ್ನೆಲೆಯಲ್ಲಿ ಶಾಸಕ ಸ್ಥಾನಕ್ಕೆ ಸಲ್ಲಿಸಿದ್ದ ರಾಜೀನಾಮೆಯನ್ನು ಬುಧವಾರ (ಆಗಸ್ಟ್ 5) ಹಿಂಪಡೆದಿದ್ದಾರೆ.
ಸಚಿವ ಸಂಪುಟ ವಿಸ್ತರಣೆಯ ಪಟ್ಟಿ ಪ್ರಕಟವಾದ ಬಳಿಕ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಯಶವಂತರಾಯಗೌಡ ಪಾಟೀಲ ಅಸಮಾಧಾನ ವ್ಯಕ್ತಪಡಿಸಿ, ನೂತನ ಸಚಿವರು ಪ್ರಮಾಣವಚನ ಸ್ವೀಕರಿಸುವ ಮುನ್ನವೇ ಕರ್ನಾಟಕ ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು.
ಆದರೆ ಇದೀಗ ತಮ್ಮ ನಿರ್ಧಾರವನ್ನು ಬದಲಿಸಿಕೊಂಡಿರುವ ಅವರು, ಆಗಸ್ಟ್ 3ರಂದು ಸಲ್ಲಿಸಿದ್ದ ರಾಜೀನಾಮೆಯನ್ನು ಹಿಂಪಡೆಯುತ್ತಿರುವುದಾಗಿ ಕರ್ನಾಟಕ ವಿಧಾನಸಭೆಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ "ಆಗಸ್ಟ್ 3ರಂದು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೆ. ಆದರೆ ಇದೀಗ ಆ ರಾಜೀನಾಮೆ ಪತ್ರವನ್ನು ಹಿಂಪಡೆಯುತ್ತಿರುವುದಾಗಿ ತಮ್ಮ ಗಮನಕ್ಕೆ ತರುತ್ತಿದ್ದೇನೆ," ಎಂದು ತಿಳಿಸಿದ್ದಾರೆ.