ರಾಜ್ಯದೆಲ್ಲೆಡೆ ಹೊಟೇಲ್ ಗಳಲ್ಲಿ ಆಹಾರ ಗುಣಮಟ್ಟ ತಪಾಸಣೆ: ಸಚಿವ ಯು.ಟಿ ಖಾದರ್
ರಾಜ್ಯದಾದ್ಯಂತ ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತೆ ಹಾಗೂ ಪರಿಶುದ್ಧತೆ ಕುರಿತು ವ್ಯಾಪಕ ತಪಾಸಣೆ ನಡೆಸಲಾಗುತ್ತಿದೆ. ಈ ಕಾರ್ಯವನ್ನು ಮೇಲ್ಮಟ್ಟದಿಂದಲೇ ಆರಂಭಿಸಲಾಗಿದ್ದು, ಬೆಂಗಳೂರಿನ ಎಲ್ಲಾ ಪಂಚತಾರಾ ಹೋಟೆಲ್‌ಗಳಿಗೆ ಈಗಾಗಲೇ ಆರೋಗ್ಯ ಇಲಾಖೆಯ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಹೋಟೆಲ್‌ಗಳಲ್ಲೂ ತಪಾಸಣೆ ಮುಂದುವರಿಯಲಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.
ಉಡುಪಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರೋಗ ಬಂದರೆ ಚಿಕಿತ್ಸೆ ಮತ್ತು ಔಷಧಿ ನೀಡಲು ಆರೋಗ್ಯ ಇಲಾಖೆ ಇದೆ. ಆದರೆ ಆರೋಗ್ಯವು ವ್ಯಕ್ತಿಯ ಆಹಾರ ಪದ್ಧತಿ, ಜೀವನಶೈಲಿ ಹಾಗೂ ಪರಿಸರದ ಮೇಲೆ ಅವಲಂಬಿತವಾಗಿದೆ. ತಿನ್ನುವ ಆಹಾರ ಬಹಳ ಮುಖ್ಯ. ಹಾಗಾಗಿ ಪಂಚತಾರಾ ಹೋಟೆಲ್‌ಗಳ ವಿರುದ್ಧವೇ ಕ್ರಮ ಕೈಗೊಂಡರೆ, ಕೆಳಹಂತದ ಹೋಟೆಲ್‌ಗಳಿಗೂ ಎಚ್ಚರಿಕೆಯ ಸಂದೇಶ ತಲುಪುತ್ತದೆ. 'ಅವರನ್ನೇ ಬಿಡಲಿಲ್ಲ, ನಮ್ಮನ್ನೂ ಬಿಡುವುದಿಲ್ಲ' ಎಂಬ ಭಾವನೆ ಮೂಡಬೇಕು. ಸಣ್ಣ ಅಂಗಡಿಗಳ ಮೇಲಷ್ಟೇ ಕ್ರಮ ಕೈಗೊಂಡರೆ ಪ್ರಯೋಜನವಿಲ್ಲ. ಜನರಿಗೆ ಸುರಕ್ಷಿತ ಹಾಗೂ ಶುದ್ಧ ಆಹಾರ ದೊರಕಿಸುವುದೇ ನಮ್ಮ ಉದ್ದೇಶ ಎಂದರು.
ಕೆಎಫ್‌ಸಿ, ಮ್ಯಾಕ್‌ಡೊನಾಲ್ಡ್ಸ್ ಸೇರಿದಂತೆ ಎಲ್ಲ ಆಹಾರ ಸಂಸ್ಥೆಗಳಲ್ಲೂ ಬಳಸುವ ಬಣ್ಣ, ಅದರ ಗುಣಮಟ್ಟ, ಚಿಕನ್ ಎಲ್ಲಿಂದ ಬರುತ್ತದೆ, ಎಷ್ಟು ದಿನ ಸಂಗ್ರಹಿಸಲಾಗುತ್ತದೆ, ಫ್ರೋಜನ್ ಆಹಾರ ಬಳಸಲಾಗುತ್ತಿದೆಯೇ, ರಾಸಾಯನಿಕಗಳ ಬಳಕೆ ಇದೆಯೇ ಎಂಬ ಎಲ್ಲ ಅಂಶಗಳನ್ನು ಪರಿಶೀಲಿಸಲಾಗುವುದು ಎಂದು ಸಚಿವರು ಹೇಳಿದರು.ಈ ಎಲ್ಲಾ ಮಾಹಿತಿಯನ್ನು ಜನರಿಗೆ ತಿಳಿಸುವ ಜವಾಬ್ದಾರಿ ನಮ್ಮದು. ಆ ಆಹಾರವನ್ನು ಸೇವಿಸಬೇಕೋ ಬೇಡವೋ ಎಂಬುದನ್ನು ಜನರೇ ತೀರ್ಮಾನಿಸುತ್ತಾರೆ. ಜನರು ಅದನ್ನೇ ತಿನ್ನುತ್ತೇವೆ ಎಂದರೆ, ಅದರ ನಂತರ ಸರ್ಕಾರ ಏನೂ ಮಾಡಲು ಸಾಧ್ಯವಿಲ್ಲ ಎಂದು ಯು.ಟಿ. ಖಾದರ್ ಹೇಳಿದರು.