-->
 ಬೆಳ್ತಂಗಡಿ: ಭಾರೀ ಮಳೆಗೆ ಉಕ್ಕಿ ಹರಿವ ನದಿಗಳು, ಭೂಕುಸಿತದಿಂದ ರಸ್ತೆ ಸಂಚಾರ ಸ್ಥಗಿತ

ಬೆಳ್ತಂಗಡಿ: ಭಾರೀ ಮಳೆಗೆ ಉಕ್ಕಿ ಹರಿವ ನದಿಗಳು, ಭೂಕುಸಿತದಿಂದ ರಸ್ತೆ ಸಂಚಾರ ಸ್ಥಗಿತ



ಬೆಳ್ತಂಗಡಿ ತಾಲೂಕಿನಾದ್ಯಂತ ಶನಿವಾರ ಬೆಳಗ್ಗಿನಿಂದಲೇ ಧಾರಾಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಧರ್ಮಸ್ಥಳದ ನೇತ್ರಾವತಿ ಸೇರಿದಂತೆ ಬಹುತೇಕ ನದಿಗಳು ತುಂಬಿ ಹರಿಯುತ್ತಿದ್ದು, ನದಿ ತೀರದ ನಿವಾಸಿಗಳಲ್ಲಿ ನೆರೆ ಭೀತಿ ಮನೆಮಾಡಿದೆ.


ಭಾರೀ ಗಾಳಿಯಿಂದ ಅರಣ್ಯದಂಚಿನ ಪ್ರದೇಶಗಳಲ್ಲಿ ಬೃಹತ್ ಮರಗಳು ಉರುಳುವ ಆತಂಕ ಎದುರಾಗಿದ್ದು, ಸ್ಥಳೀಯರು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.

ಬೆಳ್ತಂಗಡಿ–ಕಿಲ್ಲೂರು ರಸ್ತೆಯ ಪುತ್ರಬೈಲು ಬಳಿ ಸ್ಥಳೀಯ ನದಿಯ ನೀರು ರಸ್ತೆಗೆ ಹರಿದು ಬಂದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ನೆರಿಯಾ ಸಿಯೋನ್ ಆಶ್ರಮದ ತಡೆಗೋಡೆ ಕುಸಿದು ಹಾನಿಯಾಗಿದೆ. ತಾಲೂಕಿನ ಬಹುತೇಕ ಕಿಂಡಿ ಅಣೆಕಟ್ಟುಗಳ ಮೇಲೆ ನೀರು ಉಕ್ಕಿ ಹರಿಯುತ್ತಿದ್ದು, ಹಲವೆಡೆ ಸಂಪರ್ಕ ಕಡಿತಗೊಂಡಿದೆ.

ಮುಖ್ಯ ರಸ್ತೆ ಪ್ರದೇಶಗಳ ಹಳ್ಳ-ಕೊಳ್ಳಗಳು ಹಾಗೂ ಚರಂಡಿಗಳು ತುಂಬಿ ಹರಿಯುತ್ತಿದ್ದು, ನಾವೂರು ಪೇಟೆಯ ಹಲವು ಅಂಗಡಿಗಳಿಗೆ ಮಳೆ ನೀರು ನುಗ್ಗಿದೆ.

ಮುಂಡಾಜೆ ಸುತ್ತಮುತ್ತ ಭಾರೀ ಮಳೆಯ ಪರಿಣಾಮ ನದಿ ಮತ್ತು ತೋಡುಗಳು ತುಂಬಿ ಹರಿದು ಗದ್ದೆ, ತೋಟಗಳು ಜಲಾವೃತವಾಗಿವೆ. ಕೆಲ ಮನೆಗಳಿಗೂ ನೀರು ನುಗ್ಗಿದ್ದು, ಕೃಷಿಕರು ಬೆಳೆ ಹಾನಿಯ ಆತಂಕದಲ್ಲಿದ್ದಾರೆ.

ಇದೇ ವೇಳೆ ಮುಂಡಾಜೆ–ಧರ್ಮಸ್ಥಳ ರಸ್ತೆಯಲ್ಲಿ ಭೂಕುಸಿತ ಸಂಭವಿಸಿರುವುದರಿಂದ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಉಜಿರೆ–ಧರ್ಮಸ್ಥಳ ರಾಷ್ಟ್ರೀಯ ಹೆದ್ದಾರಿಯಲ್ಲೂ ನೀರು ಹರಿದು ರಸ್ತೆ ನದಿಯಂತಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ಜಿಲ್ಲಾಡಳಿತ ಹಾಗೂ ಸಂಬಂಧಿತ ಇಲಾಖೆಗಳು ಪರಿಸ್ಥಿತಿಯನ್ನು ನಿಗಾ ವಹಿಸಿದ್ದು, ಸಾರ್ವಜನಿಕರು ಅನಗತ್ಯವಾಗಿ ಪ್ರವಾಹಪೀಡಿತ ಪ್ರದೇಶಗಳಿಗೆ ತೆರಳದಂತೆ ಹಾಗೂ ಎಚ್ಚರಿಕೆಯಿಂದ ಸಂಚರಿಸುವಂತೆ ಮನವಿ ಮಾಡಿವೆ.

Ads on article

Advertise in articles 1

advertising articles 2

Advertise under the article