ಶಿಕ್ಷಣ, ಸಂಘಟನೆಯಿಂದ ಬಿಲ್ಲವ ಸಮಾಜದ ಸಬಲೀಕರಣ: ಮಂಜುನಾಥ್ ಪೂಜಾರಿ
ಬಿಲ್ಲವ ಸಮಾಜವು ಎಲ್ಲಾ ಮುಂದುವರಿದ ಸಮಾಜಗಳೊಂದಿಗೆ ಹೆಜ್ಜೆ ಹಾಕುವ ಮೂಲಕ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಮತ್ತಷ್ಟು ಅಭಿವೃದ್ಧಿ ಹೊಂದಬೇಕು. ಸಮಾಜದ ಎಲ್ಲ ಹಿಂದುಳಿದ ವರ್ಗದ ಜನರು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಮುಖ್ಯವಾಹಿನಿಗೆ ಬರಬೇಕು ಎಂದು ನಾರಾಯಣ ಗುರು ನಿಗಮದ ಅಧ್ಯಕ್ಷ ಮಂಜುನಾಥ್ ಪೂಜಾರಿ ಹೇಳಿದರು.
ಅವರು ಬನ್ನಂಜೆ ನಾರಾಯಣ ಗುರು ಸಭಾ ಭವನದಲ್ಲಿ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ವತಿಯಿಂದ ಹಮ್ಮಿಕೊಂಡ ರಾಜ್ಯಮಟ್ಟದ ಭಾಷಣ ಸ್ಪರ್ಧೆ ಕಾರ್ಯಕ್ರಮದಲ್ಲಿ ನಾರಾಯಣಗುರುಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಧರ್ಮದ ಆಧಾರದಲ್ಲಿ ಹೋರಾಟ ನಡೆಸುವ ಬದಲು ಬದುಕಿನ ಆಧಾರದಲ್ಲಿ ಪರಸ್ಪರ ಸಹಕಾರ ಹಾಗೂ ಮಾನವೀಯ ಮೌಲ್ಯಗಳೊಂದಿಗೆ ಬದುಕಬೇಕು. ಶ್ರೀ ನಾರಾಯಣ ಗುರುಗಳ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಸಾಮರಸ್ಯವನ್ನು ಬೆಳೆಸಬೇಕಾಗಿದೆ ಎಂದರು.
ಅಮೆರಿಕ, ಪಾಕಿಸ್ತಾನ ಸೇರಿದಂತೆ ದೂರದ ದೇಶಗಳ ವಿಚಾರದ ಬಗ್ಗೆ ಚಿಂತಿಸುವುದಕ್ಕಿಂತ ಮೊದಲು ನಮ್ಮ ಅಕ್ಕಪಕ್ಕದವರನ್ನು ಪ್ರೀತಿಸುವ ಹಾಗೂ ಅವರೊಂದಿಗೆ ಉತ್ತಮ ಬಾಂಧವ್ಯ ಬೆಳೆಸುವ ಮನೋಭಾವ ಬೆಳೆಸಿಕೊಳ್ಳಬೇಕು. ಕುಲ, ಜಾತಿ ಎಂದು ಪರಸ್ಪರ ಹೊಡೆದಾಡಿಕೊಳ್ಳುವ ಬದಲು ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡಿ ಸಹೋದರತ್ವದಿಂದ ಬದುಕಬೇಕು ಎಂದು ಅವರು ಕರೆ ನೀಡಿದರು.
ಸಮಾಜದ ಪ್ರತಿಯೊಬ್ಬರೂ ಶಿಕ್ಷಣ, ಸಂಘಟನೆ ಹಾಗೂ ಸಬಲೀಕರಣಕ್ಕೆ ಒತ್ತು ನೀಡುವ ಮೂಲಕ ಸಮಾನತೆ ಮತ್ತು ಸಾಮರಸ್ಯದ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಮಂಜುನಾಥ್ ಪೂಜಾರಿ ಹೇಳಿದರು.
ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ಮಾತನಾಡಿ, ಸಮುದಾಯದ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು. ಸಮಾಜದಲ್ಲಿ ಶಾಂತಿ, ಸಾಮರಸ್ಯ ಹಾಗೂ ಸಹಬಾಳ್ವೆಯ ಸಂದೇಶವನ್ನು ಸಾರುವ ಮೂಲಕ ಬಿಲ್ಲವ ಸಮಾಜ ಮತ್ತಷ್ಟು ಬಲಿಷ್ಠವಾಗಬೇಕು.ಬಿಲ್ಲವ ಸಮಾಜದ ಅಭಿವೃದ್ಧಿ ಹಾಗೂ ಬೇಡಿಕೆಗಳಿಗೆ ಶಾಸಕನಾಗಿ ಸದಾ ನಿಮ್ಮೊಂದಿಗೆ ನಿಲ್ಲುವುದಾಗಿ ಭರವಸೆ ನೀಡಿದರು.
ಮಾಜಿ ಶಾಸಕ ರಘುಪತಿ ಭಟ್ ಮಾತನಾಡಿ, ದೇಶದಲ್ಲಿ ಆ ಕಾಲದಲ್ಲಿ ಕಾಡುತ್ತಿದ್ದ ಸಾಮಾಜಿಕ ಪಿಡುಗುಗಳಿಗೆ ಮದ್ದು ಹುಡುಕಿದ ಮಹಾನ್ ಚಿಂತಕ ನಾರಾಯಣ ಗುರುಗಳು. ಅವರು ಯಾವುದೇ ಸಂಸ್ಥಾನ ಕಟ್ಟಿದವರಲ್ಲ. ಹೀಗಾಗಿ ಧಾರ್ಮಿಕ ಮುಖಂಡರ ಪೈಕಿ ನಾರಾಯಣ ಗುರುಗಳು ಇಂದಿಗೂ ಪ್ರಸ್ತುತರಾಗಿದ್ದಾರೆ. ಇಂದು ನಾರಾಯಣ ಗುರು ನಿಗಮ ರಚಣೆಯಾಗಿದೆ ಎಂದರೆ ಅದರಲ್ಲಿ ಬಿಲ್ಲವ ಯುವ ವೇದಿಕೆಯ ಹೋರಾಟದ ಪರಿಶ್ರಮ ಇದೆ. ಈ ನಿಗಮದ ಮೂಲಕ ಶೈಕ್ಷಣಿಕ ಆರ್ಥಿಕತೆ ಹಾಗೂ ಸಾಮಾಜಿಕ ಅಭಿವೃದ್ಧಿ ಆಗಲಿ ಎಂದರು.
ಉಡುಪಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಮಾತನಾಡಿ, ಬಿಲ್ಲವ ಸಮುದಾಯದ ಬೇಡಿಕೆಗಳನ್ನು ಸರ್ಕಾರದ ಮುಂದಿಡುವ ಪ್ರಯತ್ನದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಪ್ರವೀಣ್ ಎಂ. ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕ ರಘುಪತಿ ಭಟ್,ಉಡುಪಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್, ಕಾಪು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ ಅಡ್ವೇ, ಉದ್ಯಮಿ ಎಸ್. ಕೆ. ಸಾಲ್ಯಾನ್ ಬೆಳ್ಳಣ್, ಮಲ್ಪೆ ಸಾಯಿಶ್ಯಾಮ್ ಬೋಟ್ ಹರೀಶ್, ಮಣಿಪಾಲ ಉದಯ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ರಮೇಶ್ ಎ. ಬಂಗೇರ, ಗ್ರೂಪ್ ಆಫ್ ಶಿವಸಾಗರ್ ಆಡಳಿತ ನಿರ್ದೇಶಕ ಪ್ರಭಾಕರ್ ಪೂಜಾರಿ,, ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ, ಆದಿಉಡುಪಿ ಇದರ ಅಧ್ಯಕ್ಷ ಸೂರ್ಯೋದಯ ಪೆರಂಪಳ್ಳಿ, ಮಣಿಪಾಲ ಬಬ್ಬುಸ್ವಾಮಿ ದೇವಸ್ಥಾನದ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಮಣಿಪಾಲ, ಕಂಗಣಬೆಟ್ಟು ಶ್ರೀ ಭ.ತೀ.ಭಕ್ತ ವೃಂದ (ರಿ.),ಕಟ್ಟಡ ಸಮಿತಿ ಅಧ್ಯಕ್ಷ ವಿಶ್ವನಾಥ್ ಬೆಲ್ಚಡ, ತೋನ್ಸೆ ಬ್ರಹ್ಮ ಬೈದರ್ಕಳ ಪಂಚಧೂಮಾವತೀ ಗರೋಡಿಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಿನೇಶ್ ಜತ್ತನ್, ಬಿಲ್ಲವ ಸಂಘ ಪಡುಬಿದ್ರಿ ಇದರ ಅಧ್ಯಕ್ಷ ವೈ. ಸುಧೀರ್ ಪಡುಬಿದ್ರಿ, ಬಿಲ್ಲವ ಸೇವಾ ಸಂಘ (ರಿ.) ಸಂತೆಕಟ್ಟೆ ಇದರ ಗೌರವಾಧ್ಯಕ್ಷ ಭಾಸ್ಕರ್ ಜತ್ತನ್, ಉದ್ಯಮಿ ಸೂರಜ್ ಪೂಜಾರಿ ಮಲ್ಪೆ, ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಗೌರವಾಧ್ಯಕ್ಷ ದಿವಾಕರ್ ಸನಿಲ್ ಉಪಸ್ಥಿತರಿದ್ದರು.
ತೇಜೇಶ್ ಕಾರ್ಯಕ್ರಮ ನಿರೂಪಿಸಿದರು. ಸುನಿಲ್ ಕುಮಾರ್ ಧನ್ಯವಾದವಿತ್ತರು.


