ಕರಾವಳಿಯಲ್ಲಿ ಮೀನುಗಾರ ಸಮುದಾಯಕ್ಕೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನ ನೀಡುವ ಬಗ್ಗೆ ಚಿಂತನೆ: ಸುಣಗಾರ್
ಕರಾವಳಿ ಭಾಗದಲ್ಲಿ ಮೀನುಗಾರ ಸಮುದಾಯದ ಪ್ರಾತಿನಿಧ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ, ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಮೀನುಗಾರ ಸಮುದಾಯದವರಿಗೆ ಅವಕಾಶ ನೀಡುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಕರ್ನಾಟಕ ರಾಜ್ಯ ಮೀನುಗಾರರ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಸುಣಗಾರ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ರಾಜ್ಯಾದ್ಯಂತ ಜಿಲ್ಲಾ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆಯನ್ನು ಸುಸೂತ್ರವಾಗಿ ನಡೆಸುವ ಉದ್ದೇಶದಿಂದ 'ಸಂಘಟನಾ ಸೃಜನ್ ಅಭಿಯಾನ' ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದ ಮೂಲಕ ಜಿಲ್ಲೆಯ ಮಟ್ಟದಲ್ಲಿ ಸಂಘಟನೆಯ ಬಲವರ್ಧನೆಗೆ ಒತ್ತು ನೀಡಲಾಗುತ್ತಿದ್ದು, ಅಗತ್ಯವಿರುವ ಕಡೆಗಳಲ್ಲಿ ಜಿಲ್ಲಾ ಅಧ್ಯಕ್ಷರ ಬದಲಾವಣೆಯ ಪ್ರಕ್ರಿಯೆಯನ್ನು ನಿಯೋಜಿತ ತಂಡದ ಮೂಲಕ ಕೈಗೊಳ್ಳಲಾಗಿದೆ ಎಂದರು.
ಪಕ್ಷದ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸಂಘಟನಾತ್ಮಕವಾಗಿ ದುಡಿದ ಪದಾಧಿಕಾರಿಗಳನ್ನು ಗುರುತಿಸಿ, ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸುವ ಬಗ್ಗೆ ತೀರ್ಮಾನಿಸಲಾಗಿದೆ. ಅಲ್ಲದೇ ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವುದರ ಜೊತೆಗೆ, ನಿಷ್ಠೆಯಿಂದ ದುಡಿದ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಕಲ್ಪಿಸುವ ಮೂಲಕ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸಲಾಗುವುದು ಎಂದರು.
ಸುದ್ದಿಗೋಷ್ಟಿಯಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್, ಕೆಪಿಸಿಸಿ ಉಡುಪಿ ಜಿಲ್ಲಾ ಮೀನುಗಾರರ ಕಾಂಗ್ರೆಸ್ ಸಮಿತಿಯ ಮಹಿಳಾ ಅಧ್ಯಕ್ಷೆ ನಿರೀಕ್ಷಾ ಮೆಂಡನ್, ಪ್ರಮುಖರಾದ ಉಪೇಂದ್ರ ಮೆಂಡನ್, ಮಹಾಬಲ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.