-->
 ಭಜನೋತ್ಸವದಿಂದ ಮನೆ ಮನೆಗಳಲ್ಲಿ ಭಜನೆ ಮೊಳಗಲಿ: ಡಾ. ನಿ.ಬಿ ವಿಜಯ ಬಲ್ಲಾಳ್

ಭಜನೋತ್ಸವದಿಂದ ಮನೆ ಮನೆಗಳಲ್ಲಿ ಭಜನೆ ಮೊಳಗಲಿ: ಡಾ. ನಿ.ಬಿ ವಿಜಯ ಬಲ್ಲಾಳ್


ಇಂದಿನ ತಾಂತ್ರಿಕ ಯುಗದಲ್ಲಿ ಮಾನಸಿಕ ಒತ್ತಡ ನಿವಾರಣೆ, ಏಕಾಗ್ರತೆ ವೃದ್ಧಿ ಹಾಗೂ ಭಗವಂತನನ್ನು ಒಲಿಸಿಕೊಳ್ಳುವ ಸುಲಭ ಸಾಧನ ಭಜನೆ. ಭಜನೋತ್ಸವಗಳ ಮೂಲಕ ಮನೆ ಮನೆಗಳಲ್ಲಿ ಭಜನೆಯ ನಾದ ಮೊಳಗುವಂತಾಗಬೇಕು ಹಾಗೂ ಭಜನಾ ಸಂಸ್ಕೃತಿಯ ಗತವೈಭವ ಮರುಕಳಿಸಬೇಕು ಎಂದು ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ್ ಹೇಳಿದರು.


ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ವತಿಯಿಂದ, ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಆಶ್ರಯದಲ್ಲಿ ದೇವಳದ ಶ್ರೀ ಭವಾನಿ ಮಂಟಪದಲ್ಲಿ ಆಯೋಜಿಸಿದ್ದ ಉಡುಪಿ ತಾಲೂಕು ಮಟ್ಟದ 'ಭಜನೋತ್ಸವ–2026' ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.


ದಾಸವರೇಣ್ಯರು ರಚಿಸಿರುವ ಭಜನೆಗಳು ವೇದ-ಉಪನಿಷತ್ತುಗಳ ಸಾರವನ್ನು ಒಳಗೊಂಡ ಅಮೂಲ್ಯ ಕೃತಿಗಳಾಗಿದ್ದು, ತತ್ವಾದರ್ಶಗಳನ್ನು ಸರಳ ಭಾಷೆಯಲ್ಲಿ ಜನರಿಗೆ ತಲುಪಿಸುತ್ತವೆ. ಭಜನೆ ಮಾನಸಿಕ ನೆಮ್ಮದಿಯ ಜೊತೆಗೆ ಭಗವಂತನ ಸಾಕ್ಷಾತ್ಕಾರಕ್ಕೆ ದಾರಿಯಾಗಿದೆ ಎಂದು ಅವರು ತಿಳಿಸಿದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ಮಾತನಾಡಿ, ಯುವಜನತೆಯನ್ನು ದಾರಿ ತಪ್ಪಿಸುವ ಹಲವು ಪ್ರಯತ್ನಗಳು ನಡೆಯುತ್ತಿರುವ ಇಂದಿನ ಸಂದರ್ಭದಲ್ಲಿ ಸದೃಢ ಮನಸ್ಥಿತಿ ಹಾಗೂ ಮೌಲ್ಯಾಧಾರಿತ ಜೀವನಕ್ಕೆ ಭಜನೆಯೇ ಉತ್ತಮ ಮಾರ್ಗವಾಗಿದೆ. ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವಯೋಮಾನದ ಜನರು ಭಜನಾ ಸಂಸ್ಕೃತಿಯ ಸದುಪಯೋಗ ಪಡೆದುಕೊಳ್ಳಬೇಕಾದ ಅಗತ್ಯವಿದೆ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ನ ಉಡುಪಿ ಜಿಲ್ಲಾ ನಿರ್ದೇಶಕ ಬಿ. ನಾಗರಾಜ ಶೆಟ್ಟಿ, ಭಜನಾ ಪರಿಷತ್ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ಕುಮಾರ್ ಬಸ್ರೂರು, ಮಲ್ಪೆ ಶ್ರೀ ವಿಠೋಬ ಭಜನಾ ಮಂದಿರ-ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಾಲ್ ಸಿ. ಬಂಗೇರ, ಉಡುಪಿ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಜನಜಾಗೃತಿ ವೇದಿಕೆ ಉಡುಪಿ ತಾಲೂಕು ಅಧ್ಯಕ್ಷ ರಾಜು ಪೂಜಾರಿ ಉಪ್ಪೂರು, ಉಡುಪಿ ತಾಲೂಕು ಯೋಜನಾಧಿಕಾರಿ ಸುರೇಂದ್ರ ನಾಯ್ಕ್, ಜಿಲ್ಲಾ ಸಮನ್ವಯಾಧಿಕಾರಿ ರವೀಂದ್ರ ಎಸ್. ಹಾಗೂ ಸುಬ್ರಹ್ಮಣ್ಯ ಆಚಾರ್ಯ ಹಿರಿಯಡ್ಕ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.


ಭಜನೋತ್ಸವದ ಯಶಸ್ವಿ ಆಯೋಜನೆಗೆ ಸಹಕರಿಸಿದ ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ್ ಅವರನ್ನು ಉಡುಪಿ ತಾಲೂಕು ಭಜನಾ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು.

ತಾಲೂಕು ಭಜನಾ ಪರಿಷತ್ ಉಪಾಧ್ಯಕ್ಷೆ ವಜ್ರಾಕ್ಷಿ ಪಿ. ದಾಸ್, ವಲಯ ಸಂಯೋಜಕರಾದ ಪ್ರದೀಪ್ ಕುಮಾರ್, ಲತಾ ನಾಯ್ಕ್, ರೂಪಾಶ್ರೀ, ಶೋಭಾ ಪೂಜಾರಿ, ಅಂಬಲಪಾಡಿ ವಲಯ ಮೇಲ್ವಿಚಾರಕಿ ಪ್ರಭಾವತಿ, ಸೇವಾ ನಿರತೆ ಹೇಮಾ, ಒಕ್ಕೂಟದ ಅಧ್ಯಕ್ಷೆ ಸವಿತಾ ಸಂತೋಷ್ ಸೇರಿದಂತೆ ಯೋಜನೆಯ ಪ್ರಮುಖರು, ಒಕ್ಕೂಟದ ಪದಾಧಿಕಾರಿಗಳು ಹಾಗೂ ಭಜನಾ ಮಂಡಳಿಗಳ ಸದಸ್ಯರು ಉಪಸ್ಥಿತರಿದ್ದರು.

ತಾಲೂಕು ಭಜನಾ ಪರಿಷತ್ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕೋಶಾಧಿಕಾರಿ ಪೂರ್ಣಿಮಾ ಪೆರ್ಡೂರು ವಂದಿಸಿದರು. ಉಪನ್ಯಾಸಕಿ ನಳಿನಾ ಹಿರಿಯಡ್ಕ ಕಾರ್ಯಕ್ರಮ ನಿರೂಪಿಸಿದರು.

ಉಡುಪಿ ತಾಲೂಕಿನಾದ್ಯಂತ 50ಕ್ಕೂ ಹೆಚ್ಚು ಭಜನಾ ಮಂಡಳಿಗಳ ಸುಮಾರು 750ಕ್ಕೂ ಅಧಿಕ ಭಜಕರು ಕುಣಿತ ಭಜನೆ ಸೇರಿದಂತೆ ವಿವಿಧ ಭಜನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ತಾಲೂಕು ಭಜನಾ ಪರಿಷತ್ ವತಿಯಿಂದ ಎಲ್ಲಾ ಭಜನಾ ಮಂಡಳಿಗಳ ಪ್ರಮುಖರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಬಳಿಕ ಶ್ರೀ ದೇವಳದಲ್ಲಿ ನಡೆದ ಮಹಾಪೂಜೆಯಲ್ಲಿ ಸಾಮೂಹಿಕವಾಗಿ ಭಾಗವಹಿಸಿದ ಭಕ್ತರು ಅನ್ನಪ್ರಸಾದ ಸ್ವೀಕರಿಸುವ ಮೂಲಕ ಭಜನೋತ್ಸವಕ್ಕೆ ಸಮಾರೋಪ ನೀಡಿದರು.

Ads on article

Advertise in articles 1

advertising articles 2

Advertise under the article