-->
 ಮಲ್ಪೆ ಕಡಲ ತೀರದಲ್ಲಿ ಕರ್ಕಿಡಕವಾವು ಬಲಿತರ್ಪಣ: ಪಿತೃಗಳಿಗೆ ಪಿಂಡ ಪ್ರದಾನ

ಮಲ್ಪೆ ಕಡಲ ತೀರದಲ್ಲಿ ಕರ್ಕಿಡಕವಾವು ಬಲಿತರ್ಪಣ: ಪಿತೃಗಳಿಗೆ ಪಿಂಡ ಪ್ರದಾನ


ಉಡುಪಿಯಲ್ಲಿ ನೆಲೆಸಿರುವ ಕೇರಳ ಸಮಾಜ ಬಾಂಧವರಿಗಾಗಿ ಮಲ್ಪೆ ಕಡಲ ತೀರದಲ್ಲಿ ಬುಧವಾರ ಕರ್ಕಿಡಕವಾವು ಬಲಿತರ್ಪಣ ಕಾರ್ಯಕ್ರಮ ನಡೆಯಿತು. ಕೇರಳ ಸಮಾಜಮ್ ಉಡುಪಿ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.


ಮಲಯಾಳಂ ಕ್ಯಾಲೆಂಡರ್‌ನ ಕರ್ಕಿಡಕಂ ತಿಂಗಳ ಅಮಾವಾಸ್ಯೆಯ ದಿನವನ್ನು ಕೇರಳದಲ್ಲಿ ‘ಕರ್ಕಿಡಕ ವಾವು’ ಎಂದು ಕರೆಯಲಾಗುತ್ತದೆ. ಹಿಂದೂ ಧಾರ್ಮಿಕ ನಂಬಿಕೆಯ ಪ್ರಕಾರ ಈ ದಿನ ಅಗಲಿದ ಪಿತೃಗಳನ್ನು ಸ್ಮರಿಸಿ ಅವರಿಗೆ ಪಿಂಡ ಪ್ರದಾನ, ತರ್ಪಣ ಹಾಗೂ ಬಲಿಕರ್ಮ ನೆರವೇರಿಸುವುದು ವಿಶೇಷ ಮಹತ್ವ ಹೊಂದಿದೆ. ಪಿತೃಗಳ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಅವರ ಆಶೀರ್ವಾದ ಕುಟುಂಬದ ಮೇಲಿರಲಿ ಎಂಬ ನಂಬಿಕೆಯಿಂದ ಕೇರಳದ ವಿವಿಧೆಡೆ ಈ ದಿನ ಸಾವಿರಾರು ಮಂದಿ ನದಿಗಳು, ಸಮುದ್ರ ತೀರಗಳು ಸೇರಿದಂತೆ ಪುಣ್ಯ ಜಲಸ್ಥಳಗಳಲ್ಲಿ ಬಲಿತರ್ಪಣ ನೆರವೇರಿಸುತ್ತಾರೆ.


ಕರ್ಕಿಡಕ ವಾವು ದಿನದಂದು ಬೆಳಗ್ಗೆಯೇ ಪಿತೃಗಳನ್ನು ಸ್ಮರಿಸಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ, ಪಿಂಡ ಪ್ರದಾನ ಮಾಡುವ ಸಂಪ್ರದಾಯ ಕೇರಳದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ವಿಶೇಷವಾಗಿ ಕೇರಳದ ಪ್ರಮುಖ ಕಡಲ ತೀರಗಳು ಹಾಗೂ ನದಿ ತೀರಗಳಲ್ಲಿ ಈ ದಿನ ಬಲಿತರ್ಪಣಕ್ಕಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ.


ಉದ್ಯೋಗ, ಶಿಕ್ಷಣ ಸೇರಿದಂತೆ ವಿವಿಧ ಕಾರಣಗಳಿಂದ ಉಡುಪಿಯಲ್ಲಿ ನೆಲೆಸಿರುವ ಕೇರಳದವರಿಗೆ ಕೇರಳಕ್ಕೆ ತೆರಳಿ ಕರ್ಕಿಡಕ ವಾವು ಬಲಿತರ್ಪಣ ನೆರವೇರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕೇರಳ ಸಮಾಜಮ್ ಉಡುಪಿ ಕಳೆದ ಎರಡು ವರ್ಷಗಳಿಂದ ಮಲ್ಪೆ ಕಡಲ ತೀರದಲ್ಲೇ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.


ಕೊಯಿಕೋಡ್‌ನಿಂದ ಆಗಮಿಸಿದ್ದ ಹಿರಿಯ ಪುರೋಹಿತ ಶ್ರೀ ಕುಮಾರ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಬಳಿಕ ಭಾಗವಹಿಸಿದ್ದವರು ಅಗಲಿದ ತಮ್ಮ ಕುಟುಂಬ ಸದಸ್ಯರು ಹಾಗೂ ಪಿತೃಗಳಿಗೆ ಪಿಂಡ ಪ್ರದಾನ ಮತ್ತು ಬಲಿತರ್ಪಣ ನೆರವೇರಿಸಿದರು. ಧಾರ್ಮಿಕ ವಿಧಿವಿಧಾನಗಳ ಬಳಿಕ ಸಮುದ್ರ ಸ್ನಾನ ಮಾಡಿದರು.

ಕಾರ್ಯಕ್ರಮದಲ್ಲಿ ಉಡುಪಿಯಲ್ಲಿ ನೆಲೆಸಿರುವ ಕೇರಳ ಸಮಾಜದ ನೂರಾರು ಮಂದಿ ಭಾಗವಹಿಸಿ ತಮ್ಮ ಪಿತೃಗಳನ್ನು ಸ್ಮರಿಸಿದರು. ಉದ್ಯೋಗ ಹಾಗೂ ಇತರ ಕಾರಣಗಳಿಂದ ತವರು ರಾಜ್ಯದಿಂದ ದೂರವಿದ್ದರೂ ಕೇರಳದ ಸಾಂಪ್ರದಾಯಿಕ ಆಚರಣೆಗಳನ್ನು ಮುಂದುವರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಮಹತ್ವ ಪಡೆದಿದೆ.

ಈ ಸಂದರ್ಭದಲ್ಲಿ ಕೇರಳ ಸಮಾಜಮ್ ಉಡುಪಿ ರಿ. ಅಧ್ಯಕ್ಷ ಅರುಣ್ ಕುಮಾರ್, ಕಾರ್ಯದರ್ಶಿ ಪ್ರಶಾಂತ್ ಕುಮಾರ್, ಕೋಶಾಧಿಕಾರಿ ರಮೇಶ್ ಈ.ಪಿ., ವಸಂತ್ ಕುಮಾರ್, ಪ್ರದೂಶ್ ಸೇರಿದಂತೆ ಸಮಾಜದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

 


 

Ads on article

Advertise in articles 1

advertising articles 2

Advertise under the article