-->
ಕಾಪು: ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ 8ನೇ ಶಾಖೆ ಉದ್ಘಾಟನೆ

ಕಾಪು: ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ 8ನೇ ಶಾಖೆ ಉದ್ಘಾಟನೆ


ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ನೂತನ ಶಾಖೆಯನ್ನು ಕಾಪು ಹೊಸ ಮಾರಿಗುಡಿಯ ಎದುರಿನ ಶ್ರೀ ನಾರಾಯಣಗುರು ಕಾಂಪ್ಲೆಕ್ಸ್‌ನಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಬುಧವಾರ ಉದ್ಘಾಟಿಸಿದರು. 

ಇದು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ 8ನೇ ಶಾಖೆಯಾಗಿದೆ. 

ಸಭೆಯನ್ನುದ್ದೇಶಿಸಿ ಮಾತನಾಡಿದ ವಿನಯಕುಮಾರ್ ಸೊರಕೆ ಅವರು, ಆಧುನಿಕತೆಯ ಭರದಲ್ಲಿ ಸಾಂಪ್ರದಾಯಿಕ ವೃತ್ತಿಗಳು ನಶಿಸಿ ಹೋಗುತ್ತಿದ್ದು, ಸಾಂಪ್ರದಾಯಿಕ ಪರಂಪರೆ, ಕೌಶಲ್ಯ, ಕಲೆಯನ್ನು ಉಳಿಸಿ ಬೆಳೆಸಲು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘವು ಶ್ರಮಿಸುತ್ತಿರುವುದು ಶ್ಲಾಘನೀಯ. ಸಂಘವು ರೂ. 100 ಕೋಟಿ ಠೇವಣಿ ಸಂಗ್ರಹಿಸುವ ಮೂಲಕ ಮಹತ್ವದ ಸಾಧನೆ ಮಾಡಿದೆ. ಸುಮಾರು ₹80 ಕೋಟಿ ಸಾಲ ವಿತರಿಸಿ ರಾಷ್ಟ್ರೀಕೃತ ಬ್ಯಾಂಕ್ ಹಾಗೂ ವಿವಿಧ ಸಹಕಾರಿ ಹಣಕಾಸು ಸಂಸ್ಥೆಗಳಿಗೆ ತೀವ್ರ ಪೈಪೋಟಿ ನೀಡಿ ಸಾಧನೆ ಮೆರೆದಿದೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸಂತೋಷ ಕುಲಾಲ್ ಪಕ್ಕಾಲು ಮಾತನಾಡಿ, ಕುಂಬಾರಿಕೆ ಕಲೆಯನ್ನು ಪ್ರೋತ್ಸಾಹಿಸುವ ಜೊತೆಗೆ ಕ್ಲೇ ಆರ್ಟ್ ಬ್ರಾಂಡಿನ ಶೋರೂಮ್ ಗಳ ಮೂಲಕ ವಿವಿಧ ಕಲಾಕೃತಿಗಳ ತಯಾರಿ ಮತ್ತು ಪ್ರದರ್ಶನಕ್ಕೆ ಉತ್ತೇಜನ ನೀಡುವುದು ಸಂಸ್ಥೆಯ ಉದ್ದೇಶವಾಗಿದೆ. ಬ್ಯಾಂಕಿಂಗ್ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ದೃಷ್ಟಿಯಿಂದ ಕಾಪು ಶಾಖೆಯ ಮೂಲಕ ಸ್ಥಳೀಯ ಜನರಿಗೆ ಅಗತ್ಯವಿರುವ ವಿವಿಧ ಸಾಲ ಹಾಗೂ ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು. 

ಸಿಬ್ಬಂದಿಯ ಪರಿಶ್ರಮ, ಗ್ರಾಹಕರ ವಿಶ್ವಾಸ ಹಾಗೂ ಸಾರ್ವಜನಿಕರ ಸಹಕಾರದಿಂದ ರೂ. 100 ಕೋಟಿ ಗುರಿ ಸಾಧನೆ ಸಾಧ್ಯವಾಗಿದೆ ಎಂದರು.

ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಠೇವಣಿ ಪತ್ರ ಬಿಡುಗಡೆ ಮಾಡಿದರು. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಭದ್ರತಾ ಕೊಠಡಿ ಉದ್ಘಾಟಿಸಿದರು. ಕಾಪು ಹೊಸ ಮಾರಿಗುಡಿ ಜೀರ್ಣೋದ್ಧಾರ ಮತ್ತು ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾಪು ಬಿಲ್ಲವರ ಸಹಾಯಕರ ಸಂಘದ ಅಧ್ಯಕ್ಷ ವಿಕ್ರಮ್, ಕುಲಾಲ ಸಂಘ ಕಾಪು ಅಧ್ಯಕ್ಷ ಹರೀಶ್ ಕುಲಾಲ್, ಸಂಘದ ಉಪಾಧ್ಯಕ್ಷ ಹರೀಶ್ ಕುಲಾಲ್ ಹಂದಿಬೆಟ್ಟು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. 


ಈ ಸಂದರ್ಭದಲ್ಲಿ ಸಂಘದ ವತಿಯಿಂದ ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ದೇಣಿಗೆ ಹಸ್ತಾಂತರಿಸಲಾಯಿತು. ಸಂಘದ ಸಿಇಒ ಸುಧಾಕರ್ ಕುಲಾಲ್ ಸ್ವಾಗತಿಸಿ, ಮಂಜುನಾಥ್ ಕೆ. ಕಾರ್ಯಕ್ರಮ ನಿರೂಪಿಸಿದರು.

Ads on article

Advertise in articles 1

advertising articles 2

Advertise under the article