-->
 ಪಕ್ಷದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ: ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಿಶನ್ ಹೆಗ್ಡೆ

ಪಕ್ಷದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ: ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕಿಶನ್ ಹೆಗ್ಡೆ


ಕಾಂಗ್ರೆಸ್ ಪಕ್ಷ ತನಗೆ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಲು ಬದ್ಧನಾಗಿದ್ದು, ಪಕ್ಷದ ಸಿದ್ಧಾಂತಗಳಿಗೆ ಸದಾ ಬದ್ಧನಾಗಿರುತ್ತೇನೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ನೂತನ ಜಿಲ್ಲಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್ ಹೇಳಿದರು.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ತೀರ್ಮಾನದಂತೆ ತನ್ನನ್ನು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಅಧಿಕಾರಕ್ಕಾಗಿ ತಾನು ಎಂದಿಗೂ ವಾಮಮಾರ್ಗ ಹಿಡಿದವನಲ್ಲ. ತಾಳ್ಮೆಯಿಂದ ಕಾದರೆ ಕಾಂಗ್ರೆಸ್ ಪಕ್ಷ ಯಾವುದೇ ಜವಾಬ್ದಾರಿ ನೀಡುತ್ತದೆ ಎನ್ನುವುದಕ್ಕೆ ತಾನೇ ಉದಾಹರಣೆ. ಕಾಂಗ್ರೆಸ್ ಕಚೇರಿ ನನಗೆ ದೇವಾಲಯವಿದ್ದಂತೆ. ಅದನ್ನು ಸದಾ ಪೂಜಿಸುತ್ತೇನೆ ಎಂದು ಕಿಶನ್ ಹೆಗ್ಡೆ ಹೇಳಿದರು. ಈ ಹಿಂದೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ತನ್ನ ಹೆಸರು ಘೋಷಣೆಯಾಗಿ ಬಳಿಕ ಹಿಂಪಡೆಯಲಾಗಿತ್ತು. ಅದು ಕಹಿ ಘಟನೆಯಾಗಿದ್ದು, ಅದಕ್ಕೆ ಕಾರಣವೇನೆಂಬುದು ತನಗೆ ತಿಳಿದಿಲ್ಲ. ಆ ಸಂದರ್ಭದಲ್ಲಿ ತನ್ನ ಆಯ್ಕೆ ಸೂಕ್ತವಲ್ಲ ಎಂದು ಪಕ್ಷಕ್ಕೆ ಅನಿಸಿರಬಹುದು. ಈ ವಿಚಾರದಲ್ಲಿ ಯಾರ ಮೇಲೂ ಆರೋಪ ಮಾಡಲು ಬಯಸುವುದಿಲ್ಲ. ಪಕ್ಷದ ತೀರ್ಮಾನವನ್ನು ಗೌರವಿಸಿದ ರೀತಿಗೋ ಅಥವಾ ತಾಳ್ಮೆಯಿಂದ ನಡೆದುಕೊಂಡದ್ದಕ್ಕೋ ಮತ್ತೆ ಅಧ್ಯಕ್ಷ ಸ್ಥಾನ ನೀಡಿರಬಹುದು ಎಂದು ಅವರು ಹೇಳಿದರು.

ಪಕ್ಷಕ್ಕೆ ತನ್ನ ಸೇವೆ ಅಗತ್ಯವಿರುವವರೆಗೆ ಜಿಲ್ಲಾಧ್ಯಕ್ಷನಾಗಿ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವುದಾಗಿ ತಿಳಿಸಿದರು. ಪಕ್ಷಕ್ಕೆ ಕೇವಲ ನಾಯಕನ ಅಗತ್ಯವಿಲ್ಲ; ಕಟ್ಟಕಡೆಯ ಕಾರ್ಯಕರ್ತನ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರನ್ನು ಗುರುತಿಸಿ, ಅವರ ಮೂಲಕ ಪಕ್ಷವನ್ನು ಮತ್ತೆ ಸಂಘಟಿಸಲಾಗುವುದು. 2028ರ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯಲ್ಲೂ ಕಾಂಗ್ರೆಸ್ ಶಾಸಕರು ಇರುವಂತೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ನಾವು ಸಿಮೆಂಟ್ ಭಾಗ್ಯ, ಗೋಹತ್ಯಾ ಭಾಗ್ಯ ನೀಡುವುದಿಲ್ಲ. ಜನಪರ ಯೋಜನೆಗಳಾದ ಗೃಹಜ್ಯೋತಿ ಸೇರಿದಂತೆ ಹಲವು ಯೋಜನೆಗಳನ್ನು ನೀಡುತ್ತೇವೆ. ಯುವಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿಲ್ಲ. ಅವರ ಕೈಗೆ ಖಡ್ಗ ನೀಡುವ ಬದಲು ಪುಸ್ತಕ ನೀಡಿ, ಅವರನ್ನು ಸರಿದಾರಿಗೆ ತರುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಕಿಶನ್ ಹೆಗ್ಡೆ ಹೇಳಿದರು.

ಮಲಗಿರುವ ಕಾರ್ಯಕರ್ತರನ್ನು ಎಬ್ಬಿಸುವ ಕೆಲಸ ಮಾಡಬೇಕಿದೆ. ಕಾರ್ಯಕರ್ತರು ತಪ್ಪು ಮಾಡಿಲ್ಲ; ಅವರನ್ನು ಎಬ್ಬಿಸದೆ ಇರುವುದು ನಮ್ಮ ತಪ್ಪು. ಹೀಗಾಗಿ ಎಲ್ಲ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದು ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವ ಕೆಲಸ ಮಾಡಲಾಗುವುದು ಎಂದು ಅವರು ಹೇಳಿದರು.

Ads on article

Advertise in articles 1

advertising articles 2

Advertise under the article