-->
 ಉಡುಪಿ: ಗಣೇಶೋತ್ಸವ ಆಚರಣೆ ಹಿನ್ನೆಲೆ ಪೂರ್ವಭಾವಿ ಸಭೆ

ಉಡುಪಿ: ಗಣೇಶೋತ್ಸವ ಆಚರಣೆ ಹಿನ್ನೆಲೆ ಪೂರ್ವಭಾವಿ ಸಭೆ


ಮುಂಬರುವ ಗಣೇಶೋತ್ಸವ ಹಬ್ಬದ ಹಿನ್ನೆಲೆಯಲ್ಲಿ ಸಾರ್ವಜನಿಕ ಶಾಂತಿ, ಸುವ್ಯವಸ್ಥೆ ಹಾಗೂ ಭದ್ರತೆಯನ್ನು ಕಾಪಾಡುವ ಉದ್ದೇಶದಿಂದ ಉಡುಪಿ ಟೌನ್‌ಹಾಲ್‌ನಲ್ಲಿ ಗುರುವಾರ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ಜಂಟಿ ಆಶ್ರಯದಲ್ಲಿ ಗಣೇಶ ಪ್ರತಿಷ್ಠಾಪನಾ ಸಮಿತಿಗಳ ಸದಸ್ಯರ ಪೂರ್ವಭಾವಿ ಸಭೆ ನಡೆಯಿತು.


ಸಭೆಯಲ್ಲಿ ಗಣೇಶೋತ್ಸವವನ್ನು ಕಾನೂನುಬದ್ಧವಾಗಿ, ಶಾಂತಿಯುತವಾಗಿ ಹಾಗೂ ಸೌಹಾರ್ದಯುತವಾಗಿ ಆಚರಿಸುವಂತೆ ಸಮಿತಿಗಳ ಸದಸ್ಯರಿಗೆ ಅಗತ್ಯ ಸಲಹೆ-ಸೂಚನೆಗಳನ್ನು ನೀಡಲಾಯಿತು. ಗಣೇಶ ಮೂರ್ತಿ ಪ್ರತಿಷ್ಠಾಪನೆ, ಮೆರವಣಿಗೆ, ಧ್ವನಿವರ್ಧಕಗಳ ಬಳಕೆ, ವಾಹನ ಸಂಚಾರ ಹಾಗೂ ಪಾರ್ಕಿಂಗ್ ವ್ಯವಸ್ಥೆ, ಅಗ್ನಿ ಸುರಕ್ಷತೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಸರ್ಕಾರ ಮತ್ತು ಪೊಲೀಸ್ ಇಲಾಖೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಲಾಯಿತು. ಅದೇ ರೀತಿ ಪರಿಸರ ಸ್ನೇಹಿ ರೀತಿಯಲ್ಲಿ ಹಬ್ಬವನ್ನು ಆಚರಿಸುವ ಮೂಲಕ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದರು.


ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್,  ಉಡುಪಿ ಜಿಲ್ಲಾ ಹೆಚ್ಚುವರಿ ಜಿಲ್ಲಾಧಿಕಾರಿ ಅಭಿದ್ ಗದ್ಯಾಳ್, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ಎಸ್. ನಾಯಕ್ ಹಾಗೂ ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಇಶಿತಾ ಗುಪ್ತಾ ಉಪಸ್ಥಿತರಿದ್ದರು. ಸಭೆಯಲ್ಲಿ ಜಿಲ್ಲೆಯ ವಿವಿಧ ಗಣೇಶ ಪ್ರತಿಷ್ಠಾಪನಾ ಸಮಿತಿಗಳ ಸದಸ್ಯರು ಭಾಗವಹಿಸಿದ್ದರು.


Ads on article

Advertise in articles 1

advertising articles 2

Advertise under the article