ಅಮೆರಿಕಾ ಫೀನಿಕ್ಸ್‌ನಲ್ಲಿ 15 ಮಿಲಿಯನ್ ಡಾಲರ್ ವೆಚ್ಚದಲ್ಲಿ ವೆಂಕಟಕೃಷ್ಣ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ
ಅಮೆರಿಕದಲ್ಲಿ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಪುತ್ತಿಗೆ ಮಠ ಸಂಕಲ್ಪ ಮಾಡಿದ್ದು, ಈಗಾಗಲೇ 11 ಶಾಖೆಗಳನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಒಟ್ಟು 18 ಮಂದಿರಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಈ ಮೂಲಕ ಅಮೆರಿಕವೂ ಖ್ಯಾತ ಧಾರ್ಮಿಕ ಹಾಗೂ ತೀರ್ಥಕ್ಷೇತ್ರವಾಗಿ ರೂಪುಗೊಳ್ಳಲಿದೆ ಎಂದು ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ವಿಶ್ವಾಸ ವ್ಯಕ್ತಪಡಿಸಿದರು.
ಅಮೆರಿಕದ ಫೀನಿಕ್ಸ್‌ನಲ್ಲಿ ಪುತ್ತಿಗೆ ಮಠದ ವತಿಯಿಂದ ಸುಮಾರು 15 ಮಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ವೆಂಕಟಕೃಷ್ಣ ಮಂದಿರಕ್ಕೆ ಅ.25ರ ಭಾನುವಾರ ಶಿಲಾನ್ಯಾಸ ನೆರವೇರಿಸಿ ಅವರು ಆಶೀರ್ವಚನ ನೀಡಿದರು.
ವೆಂಕಟೇಶನು ಪ್ರತ್ಯೇಕ ಅವತಾರವಲ್ಲ, ಶ್ರೀಕೃಷ್ಣನ ಒಂದು ಸ್ವರೂಪ. ವಿಠ್ಠಲನೂ ಕೃಷ್ಣನ ಮತ್ತೊಂದು ಸ್ವರೂಪವಾಗಿದ್ದಾನೆ. ವೆಂಕಟೇಶ್ವರನನ್ನು ಸಂಪತ್ತಿನ ದೇವರೆಂದು ನಂಬಲಾಗುತ್ತದೆಯಾದರೂ, ಆತ ಜ್ಞಾನದಾಯಕನೂ ಹೌದು ಎಂದು ವಾದಿರಾಜರು ತಿಳಿಸಿದ್ದಾರೆ ಎಂದು ಶ್ರೀಗಳು ವಿವರಿಸಿದರು.
ಉಡುಪಿಯ ಶ್ರೀಕೃಷ್ಣನ ಸಾನ್ನಿಧ್ಯ ಹಾಗೂ ಪರ್ವತದ ಮೇಲಿರುವ ವೆಂಕಟೇಶ್ವರನ ಭವ್ಯತೆಯನ್ನು ನೆನಪಿಸುವ ವೆಂಕಟಕೃಷ್ಣನ ದಿವ್ಯ ಸಾನ್ನಿಧ್ಯವು ಇಲ್ಲಿನ ಭಕ್ತರಿಗೆ ಭಕ್ತಿ, ಶಾಂತಿ ಮತ್ತು ನೆಮ್ಮದಿಯನ್ನು ನೀಡಲಿದೆ. ಈ ಮಂದಿರವು ಜ್ಞಾನದಾತನ ತಾಣವಾಗಿ ರೂಪುಗೊಳ್ಳಲಿದೆ ಎಂದರು.
ಪುತ್ತಿಗೆ ಮಠದ ರಾಘವೇಂದ್ರ ಭಟ್ಟ ಕೊಡಂಚ ಅವರು ಭೂಮಿಪೂಜೆಯ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಮಠದ ದಿವಾನ ನಾಗರಾಜ ಆಚಾರ್ಯ, ಕ್ಷೇತ್ರದ ಪ್ರಧಾನ ಅರ್ಚಕ ಕಿರಣ ಆಚಾರ್ಯ ಸೇರಿದಂತೆ ದಾನಿಗಳು ಉಪಸ್ಥಿತರಿದ್ದರು.
ಶರದ್ ಪೂರ್ಣಿಮೆಯ ಶುಭ ಮುಹೂರ್ತದಲ್ಲಿ ಬೆಳಗ್ಗೆ 8.15ಕ್ಕೆ ಶ್ರೀಗಳು ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀನಿವಾಸ ದೇವರ ಉತ್ಸವಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರ ಜಯಘೋಷ, ಶ್ರೀನಿವಾಸನ ನಾಮಸಂಕೀರ್ತನೆ ಹಾಗೂ ಮಂಗಳವಾದ್ಯಗಳೊಂದಿಗೆ ಧಾರ್ಮಿಕ ಕಾರ್ಯಕ್ರಮ ನಡೆಯಿತು. ನೂರಾರು ಭಕ್ತರು ನಾಣ್ಯ, ಮುತ್ತು ಹಾಗೂ ರತ್ನಗಳನ್ನು ಸಮರ್ಪಿಸಿದರು.
ಭಕ್ತರ ಸಹಕಾರದಿಂದ ಸುಮಾರು ನಾಲ್ಕು ಎಕರೆ ವಿಶಾಲ ಪ್ರದೇಶದಲ್ಲಿ ವೆಂಕಟಕೃಷ್ಣ ಮಂದಿರ ನಿರ್ಮಾಣಗೊಳ್ಳಲಿದೆ ಎಂದು ಪುತ್ತಿಗೆ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ತಿಳಿಸಿದರು.

.jpeg)