ಉಡುಪಿ: ಕಳ್ಳತನ ಪ್ರಕರಣ- ಆರೋಪಿ ಬಂಧನ, 15 ಗ್ರಾಂ ಚಿನ್ನ ವಶ
ವೃದ್ಧೆಯೊಬ್ಬರನ್ನು ಭಾವನಾತ್ಮಕವಾಗಿ ಮಾತನಾಡಿಸಿ, ಮನೆಯೊಳಗೆ ಇಟ್ಟಿದ್ದ ಚಿನ್ನದ ಸರ ಕಳವು ಮಾಡಿದ ಪ್ರಕರಣವನ್ನು ಹಿರಿಯಡ್ಕ ಠಾಣೆಯ ಪೊಲೀಸರು ಭೇದಿಸಿದ್ದು, ಹೋಮ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನಿಂದ 1.85 ಲಕ್ಷ ರೂ. ಮೌಲ್ಯದ 15 ಗ್ರಾಂ ಚಿನ್ನ ಹಾಗೂ ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್ ಅನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಉಡುಪಿ ಜಿಲ್ಲೆಯ ಪುತ್ತೂರು ಗ್ರಾಮದ ಸುಬ್ರಹ್ಮಣ್ಯ ನಗರದ ನಿವಾಸಿ ಉಮೇಶ್ ಶೆಟ್ಟಿ (45)ಎಂದು ಗುರುತಿಸಲಾಗಿದೆ.
ಕುಕ್ಕೆಹಳ್ಳಿ ಗ್ರಾಮದ ಬಡಪಾಲು ಮನೆಯಲ್ಲಿ ವಾಸವಿದ್ದ ಬಾಬಿ ಹಾಂಡ್ತಿ (75) ಅವರ ಪುತ್ರ ಶಂಕರ ಕುಲಾಲ್ (53) ಅವರು ಸೆ. 14ರಂದು ಹಿರಿಯಡ್ಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರಿನ ಪ್ರಕಾರ, ಸೆ. 13ರಂದು ಬೆಳಿಗ್ಗೆ ಸುಮಾರು 10.30ಕ್ಕೆ 40ರಿಂದ 45 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬ ಬಾಬಿ ಹಾಂಡ್ತಿ ಅವರ ಮನೆಗೆ ಬಂದು, ಅವರ ಮಗ ದಿನೇಶ್ ಮೃತಪಟ್ಟಿರುವ ವಿಷಯ ತನಗೆ ತಿಳಿದಿದೆ ಎಂದು ಹೇಳಿದ್ದಾನೆ. ಮರುದಿನ ಮನೆಗೆ ವಿಮಾ ಅಧಿಕಾರಿಗಳು ಬರಲಿದ್ದು, ಹೆಚ್ಚಿನ ವಿಮೆ ಹಣ ಬಿಡುಗಡೆ ಮಾಡಿಸಿಕೊಡುವುದಾಗಿ ಭರವಸೆ ನೀಡಿ ಸುಮಾರು 15 ನಿಮಿಷಗಳ ಕಾಲ ಅಲ್ಲಿದ್ದು ಬಳಿಕ ತೆರಳಿದ್ದಾನೆ.
ನಂತರ ಮಧ್ಯಾಹ್ನ ಬಾಬಿ ಹಾಂಡ್ತಿ ಅವರು ಕುತ್ತಿಗೆಯಲ್ಲಿದ್ದ ಸುಮಾರು ಎರಡು ಪವನ್ ತೂಕದ ಚಿನ್ನದ ಸರವನ್ನು ಮನೆಯೊಳಗಿನ ಟೇಬಲ್ ಮೇಲೆ ಇಟ್ಟಿದ್ದರು. ಮಧ್ಯಾಹ್ನ ಸುಮಾರು 1.30ಕ್ಕೆ ಬೆಳಿಗ್ಗೆ ಬಂದಿದ್ದ ಅದೇ ವ್ಯಕ್ತಿ ಮತ್ತೆ ಮನೆಗೆ ಬಂದು, ವೃದ್ಧೆಯೊಂದಿಗೆ ಭಾವನಾತ್ಮಕವಾಗಿ ಮಾತನಾಡಿ ಸಮಾಧಾನಪಡಿಸಿದ್ದಾನೆ. ಬಳಿಕ ಆತನನ್ನು ಮನೆಯ ಜಗುಲಿಯಲ್ಲಿ ಕುಳಿತುಕೊಳ್ಳುವಂತೆ ಹೇಳಿ, ಬಾಬಿ ಹಾಂಡ್ತಿ ಅವರು ತೋಟಕ್ಕೆ ತೆರಳಿ ದನವನ್ನು ಕೊಟ್ಟಿಗೆಗೆ ಕಟ್ಟಿ ಮರಳಿದ್ದಾರೆ. ಈ ವೇಳೆ ವ್ಯಕ್ತಿ ಅಲ್ಲಿಂದ ನಾಪತ್ತೆಯಾಗಿದ್ದಾನೆ.
ಅನುಮಾನಗೊಂಡು ಮನೆಯೊಳಗೆ ಪರಿಶೀಲಿಸಿದಾಗ ಟೇಬಲ್ ಮೇಲೆ ಇಟ್ಟಿದ್ದ ಚಿನ್ನದ ಸರ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.
ಪ್ರಕರಣ ದಾಖಲಿಸಿಕೊಂಡ ಹಿರಿಯಡ್ಕ ಠಾಣೆಯ ಪೊಲೀಸರು ತನಿಖೆ ಕೈಗೊಂಡು, ಸುಮಾರು 50ರಿಂದ 60 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಜೊತೆಗೆ ತಾಂತ್ರಿಕ ಮಾಹಿತಿಯ ಆಧಾರದಲ್ಲಿ ಆರೋಪಿಯನ್ನು ಪತ್ತೆಹಚ್ಚಿದ್ದಾರೆ.
ಅ. 23ರಂದು ಉಡುಪಿಯ ಸುಬ್ರಹ್ಮಣ್ಯ ನಗರದ ಆರೋಪಿಯ ಮನೆಯ ಸಮೀಪ ಆತನನ್ನು ವಶಕ್ಕೆ ಪಡೆದು, 1.85 ಲಕ್ಷ ರೂ. ಮೌಲ್ಯದ 15 ಗ್ರಾಂ ಚಿನ್ನ ಹಾಗೂ ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್ ಅನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಹಾಗೂ ಪೊಲೀಸ್ ವೃತ್ತ ನಿರೀಕ್ಷಕ ಗೋಪಿಕೃಷ್ಣ ಅವರ ನೇತೃತ್ವದಲ್ಲಿ, ಪಿಎಸ್‌ಐ (ಕಾ.ಸು.) ಪುನೀತ್ ಕುಮಾರ್ ಬಿ.ಇ. ಹಾಗೂ ಸಿಬ್ಬಂದಿಗಳಾದ ಪ್ರವೀಣ್ ರೈ, ಪ್ರವೀಣ್ ಶೆಟ್ಟಿ, ರಮೇಶ್ ಹೆರ್ಗ, ಕೃಷ್ಣ ಪೂಜಾರಿ ಮತ್ತು ಮಹಾಂತೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.