‘ಪ್ರಾಜೆಕ್ಟ್ ಪಂಚತಂತ್ರ’ ನಾಟಕ ಪ್ರದರ್ಶನ, ‘ಯುವ ರಂಗ ಸಂಗಮ’ ಪೋಸ್ಟರ್ ಬಿಡುಗಡೆ
ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ರಜತ ಸಂಭ್ರಮದ ಸರಣಿ ಕಾರ್ಯಕ್ರಮಗಳ ಪ್ರಯುಕ್ತ ಮೈಸೂರಿನ 'ನಿರ್ದಿಗಂತ' ಅಭಿನಯಿಸಿದ 'ಪ್ರಾಜೆಕ್ಟ್ ಪಂಚತಂತ್ರ' ನಾಟಕ ಶುಕ್ರವಾರ ಐವೈಸಿ ಆಡಿಟೋರಿಯಂನಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿತು.
ಈ ಸಂದರ್ಭದಲ್ಲಿ ಸಂಸ್ಥೆಯ ರಜತ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ‘ಯುವ ರಂಗ ಸಂಗಮ’ – ರಾಜ್ಯ ಮಟ್ಟದ ಕಾಲೇಜು ವಿದ್ಯಾರ್ಥಿಗಳ ಕನ್ನಡ ನಾಟಕ ಮತ್ತು ಜಾಥಾ ಸ್ಪರ್ಧೆಯ ಅಧಿಕೃತ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಡುಪಿ ಜಿಲ್ಲಾ ಸಹಾಯಕ ನಿರ್ದೇಶಕಿ ಪೂರ್ಣಿಮಾ ಹಾಗೂ ‘ರಂಗಭೂಮಿ’ಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ಚಂದ್ರ ಕುತ್ಪಾಡಿ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಜತ ಸಂಭ್ರಮ ಸಮಿತಿಯ ಅಧ್ಯಕ್ಷ ಹರಿಪ್ರಸಾದ್ ರೈ ಮಾತನಾಡಿ, ‘ರಂಗಭೂಮಿ ಎಂಬುದು ಕೇವಲ ಮನರಂಜನೆಯ ಮಾಧ್ಯಮವಲ್ಲ, ಅದು ಜೀವನದ ಮೌಲ್ಯಗಳನ್ನು ಕಲಿಸುವ ಶಾಲೆ. ನಾಟಕಗಳು ಮತ್ತು ರಂಗಭೂಮಿಯ ವಿಭಿನ್ನ ಪ್ರಯೋಗಗಳನ್ನು ನಾವು ಪ್ರದರ್ಶನಕ್ಕಷ್ಟೇ ಸೀಮಿತಗೊಳಿಸದೆ, ಅವುಗಳು ನೀಡುವ ಸಮಾಜಮುಖಿ ಸಂದೇಶಗಳನ್ನು ತಮ್ಮ ವೈಯಕ್ತಿಕ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಕರೆ ನೀಡಿದರು.
ಕಲೆ ಮತ್ತು ಸಂಸ್ಕೃತಿಯನ್ನು ಪೋಷಿಸುತ್ತಾ ಬರುತ್ತಿರುವ ‘ಸುಮನಸಾ’ ಸಂಘಟನೆಯು ರಜತ ಮಹೋತ್ಸವದ ಪ್ರಯುಕ್ತ ಅನೇಕ ಜನಪರ, ಜನೋಪಯೋಗಿ ಕಾರ್ಯಕ್ರಮಗಳನ್ನು ಮಾಡುತ್ತಿದೆ ಎಂದು ಮಾಹಿತಿ ನೀಡಿದರು.
ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಪ್ರದೀಪ್ಚಂದ್ರ ಕುತ್ಪಾಡಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಸೌಭಾಗ್ಯ ತಂತ್ರಿ ಪ್ರಾರ್ಥನೆ ಸಲ್ಲಿಸಿದರು. ಸುಮನಸಾ ಸಂಘಟನೆಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಸ್ವಾಗತಿಸಿದರು. ವಿದ್ದು ಉಚ್ಚಿಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಚಂದ್ರಕಾಂತ್ ಕುಂದರ್ ವಂದಿಸಿದರು. ಯೋಗೀಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು. ರಜತ ಸಂಭ್ರಮ ಸಮಿತಿ ಗೌರವಾಧ್ಯಕ್ಷ ಎಂ.ಎಲ್. ಸಾಮಗ, ಗೌರವ ಸಲಹೆ ಸಲಹೆಗಾರರಾದ ಸುಕನ್ಯಾ ಮಾರ್ಟಿಸ್, ಯುವರಂಗ ಸಂಗಮ ಸಂಯೋಜಕರಾದ ಪ್ರಜ್ಞಾಶ್ರೀ ಕೊಡವೂರು, ಅಕ್ಷತ್ ಅಮೀನ್ ಉಪಸ್ಥಿತರಿದ್ದರು.


