ಖಾಸಗಿ ಬಸ್ಸುಗಳ ನಡುವೆ ಮುಖಾಮುಖಿ ಢಿಕ್ಕಿ; 28 ಮಂದಿಗೆ ಗಾಯ, ಮೂವರ ಸ್ಥಿತಿ ಗಂಭೀರ
Sunday, October 25, 2026
ಎರಡು ಖಾಸಗಿ ಬಸ್ಸುಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ 28 ಮಂದಿ ಗಾಯಗೊಂಡಿದ್ದು, ಅವರಲ್ಲಿ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಕುಂದಾಪುರದ ಮುಳ್ಳಿಕಟ್ಟೆ ಸಮೀಪದ ಅರಾಟೆ ಸೇತುವೆ ಬಳಿ ಭಾನುವಾರ ಬೆಳಿಗ್ಗೆ ನಡೆದಿದೆ.
ಕುಂದಾಪುರದಿಂದ ಬೈಂದೂರಿನತ್ತ ತೆರಳುತ್ತಿದ್ದ ಶ್ರೀ ದುರ್ಗಾಂಬ ಬಸ್ಸಿಗೆ, ಮಂತ್ರಾಲಯದಿಂದ ಮಂಗಳೂರಿನತ್ತ ವೇಗವಾಗಿ ಬರುತ್ತಿದ್ದ ಗಣೇಶ್ ಬಸ್ ಎದುರಿನಿಂದ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಢಿಕ್ಕಿಯ ತೀವ್ರತೆಗೆ ಶ್ರೀ ದುರ್ಗಾಂಬ ಬಸ್ಸಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ನಿಯಂತ್ರಣ ತಪ್ಪಿದ ಬಸ್ ತಿರುಗಿ ಹಿಂಬದಿಯಿಂದ ಬರುತ್ತಿದ್ದ ಗೂಡ್ಸ್ ವಾಹನಕ್ಕೆ ಢಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಎರಡೂ ಬಸ್ಸುಗಳಲ್ಲಿದ್ದ ಪ್ರಯಾಣಿಕರು ಹಾಗೂ ಗೂಡ್ಸ್ ವಾಹನದ ಚಾಲಕ ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದ ಗಾಯಾಳುಗಳಿಗೆ ಕುಂದಾಪುರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕುಂದಾಪುರ ಸಂಚಾರ ಠಾಣೆಯ ಪಿಎಸ್‌ಐ ಅನೂಪ್ ನಾಯಕ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.