ಅ.24ರಂದು ಉಡುಪಿಯಲ್ಲಿ AIMRA ರಾಜ್ಯಮಟ್ಟದ ರಿಟೇಲರ್ಸ್ ಸಮಾವೇಶ, 12ನೇ ವಾರ್ಷಿಕೋತ್ಸವ
ಉಡುಪಿ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್ (UMRA) ಆಶ್ರಯದಲ್ಲಿ ಅಖಿಲ ಭಾರತ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್ (AIMRA)ನ ರಾಜ್ಯಮಟ್ಟದ ರಿಟೇಲರ್ಸ್ ಸಮಾವೇಶ ಹಾಗೂ 12ನೇ ವಾರ್ಷಿಕೋತ್ಸವ ಅಕ್ಟೋಬರ್ 24ರಂದು ಶನಿವಾರ ಅಜ್ಜರಕಾಡಿನ ಪುರಭವನದಲ್ಲಿ ನಡೆಯಲಿದೆ ಎಂದು ಅಸೋಸಿಯೇಶನ್ ಅಧ್ಯಕ್ಷ ವಿವೇಕ್ ಜಿ. ಸುವರ್ಣ ತಿಳಿಸಿದ್ದಾರೆ.
ಅವರು ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. 'ಗ್ರಾಹಕರಿಗೆ ಸೇವೆ, ವ್ಯಾಪಾರಿಗಳಿಗೆ ರಕ್ಷೆ, ವ್ಯವಹಾರಕ್ಕೆ ಪ್ರಾಮಾಣಿಕತೆ' ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ UMRA, ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವುದು, ಸ್ಥಳೀಯ ವ್ಯಾಪಾರಿಗಳ ಹಿತಾಸಕ್ತಿ ಕಾಪಾಡುವುದು ಹಾಗೂ ವ್ಯವಹಾರದಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಕಾಯ್ದುಕೊಳ್ಳುವ ಉದ್ದೇಶ ಹೊಂದಿದೆ.
ಮೊಬೈಲ್ ರಿಟೇಲರ್ಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಿ, ಅವರ ಧ್ವನಿಯಾಗಿ ಕಾರ್ಯನಿರ್ವಹಿಸುವುದು ಸಂಘದ ಪ್ರಮುಖ ಆಶಯವಾಗಿದೆ. ಹಲವು ವರ್ಷಗಳಿಂದ ರಿಟೇಲರ್ಗಳನ್ನು ಕಾಡುತ್ತಿದ್ದ ಸಮಸ್ಯೆಗಳನ್ನು ಸಂಘಟನೆಯು ತನ್ನ ಮೊದಲ ವರ್ಷದ ಅವಧಿಯಲ್ಲೇ ಪರಿಹರಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ಬೆಳಿಗ್ಗೆ 10 ಗಂಟೆಗೆ ಮೆಗಾ ಮೊಬೈಲ್ ಎಕ್ಸ್ಪೋ ಉದ್ಘಾಟನೆಗೊಳ್ಳಲಿದೆ. ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಗಣ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 10.30ಕ್ಕೆ 'ಉಡುಪಿಯ ಸಿಂಗಂ' ಎಂದೇ ಖ್ಯಾತರಾದ ಕೆ. ಅಣ್ಣಾಮಲೈ ಅವರೊಂದಿಗೆ ವಿಶೇಷ ಸಂವಾದ ಆಯೋಜಿಸಲಾಗಿದೆ. 'ನಾಳೆಯ ಉದ್ಯಮಿಗಳ ನಿರ್ಮಾಣ, ಇಂದಿನ ಸ್ಥಳೀಯ ವ್ಯಾಪಾರಗಳ ಸಂರಕ್ಷಣೆ' ಎಂಬ ವಿಷಯದ ಕುರಿತು ಯುವ ಉದ್ಯಮಿಗಳು ಹಾಗೂ ಸಾಮಾಜಿಕ ಜಾಲತಾಣ ಕ್ಷೇತ್ರದ ಪ್ರಮುಖರೊಂದಿಗೆ ಅವರು ಸಂವಾದ ನಡೆಸಲಿದ್ದಾರೆ. ಯುವ ಉದ್ಯಮಿಗಳು ಮತ್ತು ಯುವಜನರಿಗೆ ಮುಕ್ತ ಅವಕಾಶವಿದ್ದು, ಪ್ರಶ್ನೋತ್ತರ ಕಾರ್ಯಕ್ರಮವೂ ನಡೆಯಲಿದೆ.
ಸಂಜೆ UMRAನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಲಿದ್ದು, ನಾಡೋಜ ಡಾ. ಜಿ. ಶಂಕರ್ ಅವರು ಉದ್ಘಾಟಿಸಲಿದ್ದಾರೆ. AIMRAನ ರಾಷ್ಟ್ರಮಟ್ಟದ ಪದಾಧಿಕಾರಿಗಳು, ಮಾಜಿ ಸಚಿವ ಯು.ಟಿ. ಖಾದರ್, ಉಡುಪಿ ಜಿಲ್ಲೆಯ ಶಾಸಕರು, ರಾಜಕೀಯ ಮುಖಂಡರು ಹಾಗೂ ಸ್ಥಳೀಯ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮೊಬೈಲ್ ರಿಟೇಲರ್ಗಳ ಸಂಘಟನೆಯನ್ನು ಬಲಪಡಿಸುವುದು, ಸ್ಥಳೀಯ ವ್ಯಾಪಾರಿಗಳ ಹಿತಾಸಕ್ತಿ ಕಾಪಾಡುವುದು ಹಾಗೂ ಯುವ ಉದ್ಯಮಿಗಳಿಗೆ ಮಾರ್ಗದರ್ಶನ ನೀಡುವ ಆಶಯದೊಂದಿಗೆ ಸಮಾವೇಶ ಆಯೋಜಿಸಲಾಗಿದೆ ಎಂದರು.