ಕಾಪು ಬೀಚ್‌ನಲ್ಲಿ ಗಾಂಜಾ ಮಾರಾಟ: ಇಬ್ಬರ ಬಂಧನ, 2.85 ಲಕ್ಷ ಮೌಲ್ಯದ ಮಾದಕ ವಸ್ತು ಜಪ್ತಿ
ಪ್ರವಾಸಿಗರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಕಾಪು ಪೊಲೀಸರು ಇಬ್ಬರನ್ನು ಬಂಧಿಸಿ, 2.85 ಲಕ್ಷ ಮೌಲ್ಯದ 5.710 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಕಾಪು ತಾಲೂಕಿನ ಬೆಳಪು ಗ್ರಾಮದ ವಿನಯನಗರ ನಿವಾಸಿ ಆರೀಫ್ (38) ಹಾಗೂ ಉಡುಪಿ ತಾಲೂಕಿನ ಪಡುತೋನ್ಸೆ ಗ್ರಾಮದ ಹೂಡೆ ನಿವಾಸಿ ಅಕೀಫ್ (34) ಎಂದು ಗುರುತಿಸಲಾಗಿದೆ.
ಅಕ್ಟೋಬರ್ 27ರಂದು ಕಾಪು ಪೊಲೀಸ್ ವೃತ್ತ ನಿರೀಕ್ಷಕ ಅಜ್ಮತ್ ಆಲಿ ಅವರಿಗೆ ದೊರೆತ ಖಚಿತ ಮಾಹಿತಿಯಂತೆ, ಕಾಪು ಮತ್ತು ಮಟ್ಟು ಬೀಚ್‌ಗಳಿಗೆ ಆಗಮಿಸುವ ಪ್ರವಾಸಿಗರಿಗೆ ಇಬ್ಬರು ವ್ಯಕ್ತಿಗಳು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಅದರಂತೆ ಕಾಪು ಪೊಲೀಸ್ ಠಾಣೆಯ ಪಿಎಸ್‌ಐ ತೇಜಸ್ವಿ ಅವರ ನೇತೃತ್ವದ ತಂಡವು ಉಳಿಯಾರಗೋಳಿ ಗ್ರಾಮದ ಯಾರ್ಡ್ ಬೀಚ್‌ನಲ್ಲಿ ದಾಳಿ ನಡೆಸಿತು.
ಆರೋಪಿಗಳನ್ನು ಬಂಧಿಸಿ, ಅವರಿಂದ 5.710 ಕೆ.ಜಿ. ಗಾಂಜಾ, 225 ನಗದು ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಗಾಂಜಾದ ಮೌಲ್ಯ ಸುಮಾರು 2.85 ಲಕ್ಷ ಎಂದು ಅಂದಾಜಿಸಲಾಗಿದೆ.
ಆರೋಪಿಗಳು ಆಂಧ್ರಪ್ರದೇಶದ ಹೈದರಾಬಾದ್‌ನಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದುದಾಗಿ ವಿಚಾರಣೆ ವೇಳೆ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಈ ಹಿಂದೆಯೂ ವಿವಿಧ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳಿವೆ ಎಂದು ತಿಳಿದು ಬಂದಿದೆ.
ಕಾರ್ಕಳ ಉಪವಿಭಾಗದ ಎಎಸ್‌ಪಿ ಈಶಿತಾ ಗುಪ್ತಾ ಹಾಗೂ ಕಾಪು ವೃತ್ತ ನಿರೀಕ್ಷಕ ಅಜ್ಮತ್ ಆಲಿ ಅವರ ಮಾರ್ಗದರ್ಶನದಲ್ಲಿ, ಪಿಎಸ್‌ಐ ತೇಜಸ್ವಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಕಾಪು ಠಾಣೆಯ ಪೊಲೀಸ್ ಸಿಬ್ಬಂದಿ, ಕಾರ್ಕಳ ಉಪವಿಭಾಗದ ಆ್ಯಂಟಿ ಎನ್‌ಡಿಪಿಎಸ್ ಸ್ಕ್ವಾಡ್, ಸಿಡಿಆರ್ ತಾಂತ್ರಿಕ ವಿಭಾಗದ ಸಿಬ್ಬಂದಿ ಹಾಗೂ ಸಾಕ್ಷ್ಯ ಸಂಗ್ರಹಣಾ ಅಧಿಕಾರಿಗಳು ಕಾರ್ಯಾಚರಣೆ ಮತ್ತು ತನಿಖೆಗೆ ಸಹಕರಿಸಿದರು.