-->
ನಗರಸಭೆ ಅಧಿಕಾರಿಗಳ ವಿರುದ್ಧ ದೂರು ನೀಡುವ ಬಿಜೆಪಿಗರು 5 ವರ್ಷಗಳ ಸಾಧನೆಯ ಲೆಕ್ಕ ನೀಡಲಿ: ಸುರೇಶ್ ಶೆಟ್ಟಿ ಬನ್ನಂಜೆ

ನಗರಸಭೆ ಅಧಿಕಾರಿಗಳ ವಿರುದ್ಧ ದೂರು ನೀಡುವ ಬಿಜೆಪಿಗರು 5 ವರ್ಷಗಳ ಸಾಧನೆಯ ಲೆಕ್ಕ ನೀಡಲಿ: ಸುರೇಶ್ ಶೆಟ್ಟಿ ಬನ್ನಂಜೆ


ಕಳೆದ ಐದು ವರ್ಷಗಳಿಗೂ ಹೆಚ್ಚು ಕಾಲ ಉಡುಪಿ ನಗರಸಭೆಯಲ್ಲಿ ಆಡಳಿತ ನಡೆಸಿದ ಬಿಜೆಪಿ, ನಗರದ ಅಭಿವೃದ್ಧಿಗೆ ಅಗತ್ಯವಾದ ಕೆಲಸಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ಸ್ವಹಿತಾಸಕ್ತಿಗೆ ಆದ್ಯತೆ ನೀಡಿದ ಪರಿಣಾಮ ನಗರಸಭೆ ವ್ಯಾಪ್ತಿಯಲ್ಲಿ ನಿರೀಕ್ಷಿತ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ಉಡುಪಿ ಬ್ಲಾಕ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಮುಖಂಡ ಹಾಗೂ ಉಡುಪಿ ನಗರಸಭೆಯ ನಾಮನಿರ್ದೇಶಿತ ಸದಸ್ಯ ಸುರೇಶ್ ಶೆಟ್ಟಿ ಬನ್ನಂಜೆ ಆರೋಪಿಸಿದ್ದಾರೆ.

ಬಿಜೆಪಿ ನಗರಸಭಾ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರು ಪದೇಪದೇ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ನಗರಸಭೆಯ ಆಡಳಿತ ವ್ಯವಸ್ಥೆ ಸರಿಯಿಲ್ಲ ಎಂದು ದೂರು ನೀಡುತ್ತಿರುವುದು, ಅವರ ಆಡಳಿತಾವಧಿಯಲ್ಲಿನ ವೈಫಲ್ಯವನ್ನು ತೋರಿಸುತ್ತದೆ. ತಮ್ಮ ಆಡಳಿತದ ಅವಧಿಯಲ್ಲಿ ಏನು ಸಾಧನೆ ಮಾಡಿದ್ದಾರೆ ಎಂಬುದನ್ನು ಜನರ ಮುಂದಿಡುವ ಬದಲು ನಗರಸಭೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ದೂಷಿಸುವ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

ನಗರಸಭೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ವಿರುದ್ಧ ನಿರಂತರವಾಗಿ ಆರೋಪಗಳನ್ನು ಮಾಡುವುದರಿಂದ ಸಮಸ್ಯೆಗಳು ಬಗೆಹರಿಯುವುದಿಲ್ಲ. ಜಿಲ್ಲಾಧಿಕಾರಿಗಳು ಇಂತಹ ಆರೋಪಗಳು ಹಾಗೂ ಒತ್ತಡಗಳಿಗೆ ಮಣಿಯದೆ, ವಾಸ್ತವಾಂಶಗಳ ಆಧಾರದಲ್ಲಿ ಸೂಕ್ತ ನಿರ್ಧಾರ ಕೈಗೊಂಡು ನಗರಸಭೆಯ ಆಡಳಿತ ವ್ಯವಸ್ಥೆಯನ್ನು ಸುಗಮಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಬಿಜೆಪಿ ಆಡಳಿತದ ಅವಧಿಯಲ್ಲಿ ನಗರಸಭೆಯಲ್ಲಿ ಹಣಕಾಸಿನ ಲಭ್ಯತೆ ಇಲ್ಲದಿದ್ದರೂ ಶೂನ್ಯ ಬಾಕಿ ಸ್ಥಿತಿಯಲ್ಲಿ ಕಾಮಗಾರಿಗಳಿಗೆ ಅನುಮೋದನೆ ನೀಡಿರುವುದು ಎಷ್ಟು ಸಮಂಜಸ ಎಂಬ ಪ್ರಶ್ನೆಯನ್ನೂ ಸುರೇಶ್ ಶೆಟ್ಟಿ ಬನ್ನಂಜೆ ಎತ್ತಿದ್ದಾರೆ. ನಗರಸಭೆಯ ಹಣಕಾಸು ಸ್ಥಿತಿ, ಕಾಮಗಾರಿಗಳ ಅನುಮೋದನೆ ಹಾಗೂ ಅಭಿವೃದ್ಧಿ ಕಾರ್ಯಗಳ ಅನುಷ್ಠಾನದ ಬಗ್ಗೆ ಸಮಗ್ರ ಪರಿಶೀಲನೆ ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿಯ ಆರೋಪ-ಪ್ರತ್ಯಾರೋಪಗಳ ರಾಜಕೀಯಕ್ಕೆ ಮರುಳಾಗದೆ, ನಗರಸಭೆಯ ವ್ಯಾಪ್ತಿಯ ನಾಗರಿಕರು ಅಭಿವೃದ್ಧಿ ಕಾರ್ಯಗಳು ಮತ್ತು ಜನಪರ ಆಡಳಿತದ ಆಧಾರದಲ್ಲಿ ಮುಂದಿನ ಚುನಾವಣೆಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಸುರೇಶ್ ಶೆಟ್ಟಿ ಬನ್ನಂಜೆ ಮನವಿ ಮಾಡಿದ್ದಾರೆ

Ads on article

Advertise in articles 1

advertising articles 2

Advertise under the article