ನವರಾತ್ರಿ ಪ್ರಯುಕ್ತ ಕೆಎಸ್‌ಆರ್‌ಟಿಸಿಯಿಂದ 5 ವಿಶೇಷ ದಸರಾ ಪ್ರವಾಸ ಪ್ಯಾಕೇಜ್
ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಕರಾವಳಿ ಹಾಗೂ ಮಲೆನಾಡಿನ ಪ್ರಸಿದ್ಧ ದೇವಾಲಯಗಳು ಮತ್ತು ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಭಕ್ತಾದಿಗಳು ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಮಂಗಳೂರು ವಿಭಾಗವು ಐದು ವಿಶೇಷ ದಸರಾ ಏಕದಿನ ಪ್ರವಾಸ ಪ್ಯಾಕೇಜ್‌ಗಳನ್ನು ಘೋಷಿಸಿದೆ.
ಅಕ್ಟೋಬರ್ 11ರಿಂದ 20ರವರೆಗೆ ಈ ವಿಶೇಷ ಬಸ್‌ಗಳು ಸಂಚರಿಸಲಿದ್ದು, ಸಾರ್ವಜನಿಕರು ಆನ್‌ಲೈನ್ ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸಬಹುದು ಎಂದು ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
ಮಂಗಳೂರು ಬಸ್ ನಿಲ್ದಾಣದಿಂದ ಬೆಳಿಗ್ಗೆ 8 ಗಂಟೆಗೆ ಹೊರಟು ರಾತ್ರಿ 8.30ಕ್ಕೆ ಮರಳುವ ಈ ಪ್ಯಾಕೇಜ್‌ನಲ್ಲಿ ಮಾರೋಳಿಯ ಸೂರ್ಯನಾರಾಯಣ ದೇವಸ್ಥಾನ, ಬೋಳಾರದ ಮಾರಿಅಮ್ಮ ದೇವಸ್ಥಾನ, ಮಂಗಳಾದೇವಿ, ಪೊಳಲಿ ರಾಜರಾಜೇಶ್ವರಿ, ಹೊಸನಾಡಿನ ಕೊಡಿಯಾಡ್ಕ ಅನ್ನಪೂರ್ಣೇಶ್ವರಿ, ಕಟೀಲು ದುರ್ಗಾಪರಮೇಶ್ವರಿ, ಬಪ್ಪನಾಡು ದುರ್ಗಾಪರಮೇಶ್ವರಿ, ಸಸಿಹಿತ್ಲು ಭಗವತಿ, ಚಿತ್ರಾಪುರ ದುರ್ಗಾಪರಮೇಶ್ವರಿ, ಉರ್ವ ಮಾರಿಅಮ್ಮ ಹಾಗೂ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನಗಳಿಗೆ ಭೇಟಿ ನೀಡಬಹುದು. ವಯಸ್ಕರಿಗೆ 500 ಹಾಗೂ 6ರಿಂದ 12 ವರ್ಷದ ಮಕ್ಕಳಿಗೆ 400 ಟಿಕೆಟ್ ದರ ನಿಗದಿಪಡಿಸಲಾಗಿದೆ.
ಬೆಳಿಗ್ಗೆ 7 ಗಂಟೆಗೆ ಹೊರಟು ರಾತ್ರಿ 9.30ಕ್ಕೆ ಮಂಗಳೂರಿಗೆ ಮರಳುವ ಈ ಪ್ಯಾಕೇಜ್‌ನಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ, ತಲಕಾವೇರಿ, ಭಾಗಮಂಡಲದ ಭಾಗಂಡೇಶ್ವರ ದೇವಸ್ಥಾನ, ತ್ರಿವೇಣಿ ಸಂಗಮ, ಅಬ್ಬಿ ಜಲಪಾತ ಹಾಗೂ ಮಡಿಕೇರಿಯ ರಾಜಾಸೀಟ್ ವೀಕ್ಷಿಸಬಹುದು. ವಯಸ್ಕರಿಗೆ 600 ಹಾಗೂ ಮಕ್ಕಳಿಗೆ 500 ದರ ನಿಗದಿಯಾಗಿದೆ.
ಬೆಳಿಗ್ಗೆ 8 ಗಂಟೆಗೆ ಹೊರಟು ರಾತ್ರಿ 8 ಗಂಟೆಗೆ ಮರಳುವ ಈ ಬಸ್ ಉಚ್ಚಿಲ ಮಹಾಲಕ್ಷ್ಮಿ, ಕಾಪು ಮಾರಿಅಮ್ಮ, ಮಂದಾರ್ತಿ ದುರ್ಗಾಪರಮೇಶ್ವರಿ, ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ, ಕೊಲ್ಲೂರು ಮೂಕಾಂಬಿಕಾ ಹಾಗೂ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನಗಳಿಗೆ ತೆರಳಲಿದೆ. ವಯಸ್ಕರಿಗೆ ₹600 ಹಾಗೂ ಮಕ್ಕಳಿಗೆ 500 ಟಿಕೆಟ್ ದರವಿದೆ.
ಬೆಳಿಗ್ಗೆ 7 ಗಂಟೆಗೆ ಹೊರಟು ರಾತ್ರಿ 7.30ಕ್ಕೆ ಮಂಗಳೂರಿಗೆ ಮರಳುವ ಈ ಪ್ಯಾಕೇಜ್‌ನಲ್ಲಿ ಕುಂದಾಪುರ, ಸಿಗಂಧೂರು ಚೌಡೇಶ್ವರಿ ದೇವಸ್ಥಾನ ಹಾಗೂ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಗಳಿಗೆ ಭೇಟಿ ನೀಡಬಹುದು. ವಯಸ್ಕರಿಗೆ 700 ಹಾಗೂ ಮಕ್ಕಳಿಗೆ 600 ದರ ನಿಗದಿಪಡಿಸಲಾಗಿದೆ.
ಬೆಳಿಗ್ಗೆ 8 ಗಂಟೆಗೆ ಹೊರಟು ರಾತ್ರಿ 7.30ಕ್ಕೆ ಮರಳುವ ಈ ಪ್ಯಾಕೇಜ್‌ನಲ್ಲಿ ಕೊಡಿಯಾಡ್ಕ ಅನ್ನಪೂರ್ಣೇಶ್ವರಿ ದೇವಸ್ಥಾನ, ಶೃಂಗೇರಿ ಶಾರದಾಂಬೆ ದೇವಸ್ಥಾನ, ಹರಿಹರಪುರ ಮಠ ಹಾಗೂ ಕಿಗ್ಗಾದ ಋಷ್ಯಶೃಂಗೇಶ್ವರ ದೇವಸ್ಥಾನಗಳಿಗೆ ಭೇಟಿ ನೀಡಲು ಅವಕಾಶವಿದೆ. ವಯಸ್ಕರಿಗೆ 600 ಹಾಗೂ ಮಕ್ಕಳಿಗೆ 500 ಟಿಕೆಟ್ ದರವಿದೆ.
ಪ್ರವಾಸ ಪ್ಯಾಕೇಜ್‌ಗಳ ಟಿಕೆಟ್‌ಗಳನ್ನು ಕೆಎಸ್‌ಆರ್‌ಟಿಸಿಯ ಅಧಿಕೃತ ವೆಬ್‌ಸೈಟ್ www.ksrtc.in ಮೂಲಕ ಕಾಯ್ದಿರಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು:
ಮುಂಗಡ ಬುಕಿಂಗ್ ಕೌಂಟರ್, ಮಂಗಳೂರು: 9663211553
ಮಂಗಳೂರು ಘಟಕ-1 ವ್ಯವಸ್ಥಾಪಕರು: 7760990713
ಮಂಗಳೂರು ಘಟಕ-3 ವ್ಯವಸ್ಥಾಪಕರು: 7760990723
ಮಂಗಳೂರು ಬಸ್ ನಿಲ್ದಾಣ ವಿಚಾರಣೆ: 7760990720
ವಿಭಾಗೀಯ ಕಚೇರಿ: 7760990711 / 9663266221
ನವರಾತ್ರಿ ಹಾಗೂ ದಸರಾ ಸಂಭ್ರಮದ ಸಂದರ್ಭದಲ್ಲಿ ಒಂದೇ ದಿನದಲ್ಲಿ ಹಲವು ಪುಣ್ಯಕ್ಷೇತ್ರಗಳ ದರ್ಶನ ಪಡೆಯಲು ಈ ವಿಶೇಷ ಬಸ್ ಸೇವೆಗಳು ಭಕ್ತಾದಿಗಳಿಗೆ ಅನುಕೂಲವಾಗಲಿವೆ.