ರಘುಪತಿ ಭಟ್ ಕಾಂಗ್ರೆಸ್ ಸೇರಲು ವೇದಿಕೆ ಸಜ್ಜು!
ಉಡುಪಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಪ್ರಸ್ತುತ ಬಿಜೆಪಿಯಿಂದ ಹೊರಗಿರುವ ಕೆ. ರಘುಪತಿ ಭಟ್ ಕಾಂಗ್ರೆಸ್ ಪಕ್ಷ ಸೇರುವುದಕ್ಕೆ ಸರ್ವ ಸಿದ್ಧತೆಗಳನ್ನು ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಘುಪತಿ ಭಟ್ ಅವರ ಕಾಂಗ್ರೆಸ್ ಸೇರ್ಪಡೆಗೆ ಹಸಿರು ನಿಶಾನೆ ತೋರಿಸಿದ್ದು, ಸ್ಥಳೀಯ ಕಾಂಗ್ರೆಸ್ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ರಘುಪತಿ ಭಟ್ ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಭಟ್ ಅವರು ಈಗಾಗಲೇ ಉಡುಪಿ ಕ್ಷೇತ್ರದ ಕಾಂಗ್ರೆಸ್ ಮುಖಂಡರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿರುವುದು ಗುಟ್ಟಾಗಿ ಉಳಿದಿಲ್ಲ. ಭಟ್ ಅವರ ಕಾಂಗ್ರೆಸ್ ಪಕ್ಷದ ಸೇರ್ಪಡೆಗೆ ಒಲವು ತೋರಿದ್ದ ಸ್ಥಳೀಯ ಕಾಂಗ್ರೆಸ್ ನಾಯಕರಲ್ಲಿ ಕೆಲವರು ಕಡಿಯಾಳಿ ಗಣೇಶೋತ್ಸವ ಸಂದರ್ಭ ಆರ್.ಎಸ್.ಎಸ್. ಗೀತೆ - ನಮಸ್ತೆ ಸದಾ ವತ್ಸಲೇ… ಹಾಡು ಹಾಡುವ ರಘುಪತಿ ಭಟ್ ಅವರ ವಿಡಿಯೋ ನೋಡಿ ಪಕ್ಷ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ ಸಂಗತಿಗಳೂ ಬಯಲಾಗಿವೆ. ಸಧ್ಯಕ್ಕೆ ರಘುಪತಿ ಭಟ್ ಕಾಂಗ್ರೆಸ್ ಗೆ ಬರುವ ಬಗ್ಗೆ ಮಾತ್ರ ಚರ್ಚೆ ನಡೆಯುತ್ತಿದ್ದು, ಅವರಿಗೆ ಶಾಸಕ ಸ್ಥಾನದ ಟಿಕೆಟ್ ನೀಡುವ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ ಎನ್ನಲಾಗಿದೆ. ಆದರೂ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಶಕುಂತಲಾ ಶೆಟ್ಟಿ ಅಶೋಕ್ ರೈ ಅವರಿಗೆ ಕಾಂಗ್ರೆಸ್ ನಿಂದ ಟಿಕೆಟ್ ನೀಡಿ ಶಾಸಕರನ್ನಾಗಿ ಮಾಡಿದ ರೀತಿಯಲ್ಲಿ ರಘುಪತಿ ಭಟ್ ಅವರಿಗೂ ಟಿಕೆಟ್ ನೀಡಿ ಶಾಸಕರನ್ನಾಗಿ ಮಾಡಿ ಕಾಂಗ್ರೆಸ್ ಶಾಸಕರ ಸಂಖ್ಯೆಯನ್ನು ಹೆಚ್ಚಿಸುವ ದೂರಾಲೋಚನೆ ಡಿ.ಕೆ ಶಿವಕುಮಾರ್ ಅವರದ್ದೇ ಎಂಬ ಪ್ರಶ್ನೆ ರಾಜಕೀಯ ಚಿಂತಕರ ವಲಯದಲ್ಲಿ ಮೂಡಿದೆ.
ಈ ಮಧ್ಯೆ ತಕ್ಷಣವೇ ರಘುಪತಿ ಭಟ್ ಕಾಂಗ್ರೆಸ್ ಸೇರ್ಪಡೆಯಾದರೆ ಉಡುಪಿ ನಗರಸಭೆ ಸೇರಿದಂತೆ ಶೀಘ್ರವೇ ನಡೆಯುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳುವ ಲೆಕ್ಕಾಚಾರವೂ ಸ್ಥಳೀಯ ಕಾಂಗ್ರೆಸ್ ಮುಖಂಡರದ್ದು.
ರಘುಪತಿ ಭಟ್ ಅವರು ಕಾಂಗ್ರೆಸ್ ಪಕ್ಷ ಸೇರುವುದನ್ನು ಸ್ಪಷ್ಟವಾಗಿ ನಿರಾಕರಿಸದೆ ಇರುವುದು ಗಾಳಿ ಸುದ್ದಿಗೆ ರೆಕ್ಕೆ ಪುಕ್ಕ ಸೇರಲು ಕಾರಣವಾದದ್ದಂತೂ ಸತ್ಯ.
ರಘುಪತಿ ಭಟ್ ಏನಂದ್ರು?
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಉಡುಪಿಯ ಮಾಜಿ ಶಾಸಕ ಕೆ.ರಘುಪತಿ ಭಟ್ 'ಸ್ಟಾರ್ ಸಮಯ' ಸುದ್ದಿ ತಾಣಕ್ಕೆ ತಿಳಿಸಿದ್ದಾರೆ. “ರಘುಪತಿ ಭಟ್ ಕಾಂಗ್ರೆಸ್ ಸೇರುತ್ತಾರೆ” ಎಂಬ ಪ್ರತಿಕಾ ವರದಿಗಳು, ಗಾಳಿ ಸುದ್ದಿಗಳು ಹರಿದಾಡುತ್ತಿದ್ದ ಹಿನ್ನಲೆಯಲ್ಲಿ ರಘುಪತಿ ಭಟ್ ಅವರನ್ನು ಪ್ರಶ್ನಿಸಿದಾಗ, "ಇನ್ನೂ ಫೈನಲ್ ಆಗಿಲ್ಲ; ಡಿಸೈಡ್ ಆಗಿಲ್ಲ” ಎಂದು ‘ಗೋಡೆ ಮೇಲೆ ದೀಪ ಇಟ್ಟಂತೆ’ ಉತ್ತರಿಸಿದ್ದಾರೆ.
ಡಿ.ಕೆ. ಶಿವಕುಮಾರ್ ಅವರೊಂದಿಗೆ ಮಾತುಕತೆ ಆಗಿದೆಯಂತೆ ಎಂಬ ಮರು ಪ್ರಶ್ನೆಗೆ “ಇಲ್ಲ! ಈ ಹಿಂದೆ ನಿಮಗೆಲ್ಲ ತಿಳಿದಿರುವಂತೆ ಡಿಕೆಶಿ ಅವರೊಂದಿಗೆ ಮಾತುಕತೆ ನಡೆಸಿದ್ದು ಹೌದು. ಆದರೆ ಅವರು ಸಿ.ಎಂ. ಆದ ಮೇಲೆ ಅವರೊಂದಿಗೆ ‘ಪಕ್ಷ ಸೇರುವ ಕುರಿತು’ ಚರ್ಚೆ ನಡೆಸಿಲ್ಲ. ಕಾಂಗ್ರೆಸ್ ಪಕ್ಷದ ಇತರ ಅನೇಕ ನಾಯಕರು, ಕಾರ್ಯಕರ್ತರು ನನ್ನೊಂದಿಗೆ ಸಂಪರ್ಕ ಬೆಳೆಸಿದ್ದಾರೆ.
ಕ್ರಾಂಗೆಸ್ ಸೇರುವುದಾದರೆ ಸ್ಥಳೀಯ ಕಾಂಗ್ರೆಸ್ ಮುಖಂಡರನ್ನು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಮುಂದುವರಿಯುತ್ತೇನೆ. ನಾನು ಹಿಂದಿನಿಂದಲೂ ಜನರೊಟ್ಟಿಗೆ ಇದ್ದು ಬೆಳೆದವನು. ಈಗ ನಮ್ಮ ಪರಿಸ್ಥಿತಿ ಹೀಗೆ ಮಾಡಿಟ್ಟಿದ್ದಾರೆ. ಕಾರ್ಯಕರ್ತರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು." “ಆದರೂ ಕಾಂಗ್ರೆಸ್ ಪಕ್ಷ ನಮ್ಮ ಮೆಂಟಾಲಿಟಿಗೆ ಒಗುತ್ತದೆಯೇ ಎಂಬ ಬಗ್ಗೆ ನನಗೆ ಇನ್ನೂ ಸಂಶಯವಿದೆ. 2-3 ಪಕ್ಷ ಬದಲಾಯಿಸಿದವರಿಗೆ ಇದು ಒಗ್ಗಬಹುದು. ಯೋಚನೆ ಮಾಡುತ್ತೇನೆ" ಎಂದೂ ಅವರು ಒಂದು ವಾಕ್ಯ ಸೇರಿಸಿ ಕುತೂಹಲ ಹೆಚ್ಚುವಂತೆ ಮಾಡಿದ್ದಾರೆ.
ಕಿಶನ್ ಹೆಗ್ಡೆ ಪ್ರತಿಕ್ರಿಯೆ:
ಭಟ್ ಪಕ್ಷ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿರುವ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಪಕ್ಷಕ್ಕೆ ಲಾಭವಾಗುತ್ತದೆ ಎಂದಾದರೆ ಪಕ್ಷದ ಸಿದ್ದಾಂತಗಳನ್ನು ಒಪ್ಪಿಕೊಂಡು ಪಕ್ಷಕ್ಕೆ ಯಾರೇ ಬಂದರೂ ಸ್ವಾಗತ ಎಂದಿದ್ದಾರೆ.