ದೆಂದೂರುಕಟ್ಟೆ ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ಬಸ್ಸಿಗೆ ಬೆಂಕಿ; ಲಕ್ಷಾಂತರ ಹಾನಿ
Friday, September 25, 2026
ಉಡುಪಿ ತಾಲೂಕು ದೆಂದೂರುಕಟ್ಟೆಯ ಪೆಟ್ರೋಲ್ ಪಂಪ್ವಠಾರದಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ಸಿಗೆ ಬೆಂಕಿ ತಗುಲಿ ಬಸ್ಸು ಸಂಪೂರ್ಣ ಸುಟ್ಟು ಹೋದ ಘಟನೆ ಇಂದು ಬೆಳಗಿನ ಜಾವ ನಡೆದಿದೆ.
ಉಡುಪಿ -ಮೂಡುಬೆಳ್ಳೆ- ಕಾರ್ಕಳ ಮಾರ್ಗದ ಕೃಷ್ಣಪ್ರಸಾದ್ ಹೆಸರಿನ ಸರ್ವೀಸ್ ಬಸ್ಸನ್ನು ದೆಂದೂರುಕಟ್ಟೆಯ ಎಂ ಆರ್ ಪಿ ಎಲ್ ಪೆಟ್ರೋಲ್ ಪಂಪಿನ ಬಳಿ ಪ್ರತಿ ರಾತ್ರಿಯಂತೆ ನಿನ್ನೆ ಕೂಡ ಪಾರ್ಕ್ ಮಾಡಲಾಗಿತ್ತು. ಇಂದು ಬೆಳಗಿನ ಜಾವ 3.30ರ ಸುಮಾರಿಗೆ ಆಕಸ್ಮಿಕ ಬೆಂಕಿ ತಗುಲಿ ಬಸ್ಸು ಹೊತ್ತಿ ಉರಿದು ಸಂಪೂರ್ಣ ಸುಟ್ಟು ಕರಕಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ದುರ್ಘಟನೆಯಲ್ಲಿ 10 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ.
ಆ ಬಸ್ಸಿನ ಬಳಿಯೇ ನಿಲ್ಲಿಸಿದ್ದ ಟೆಂಪೊವೊಂದಕ್ಕೂ ಬೆಂಕಿ ಹರಡಿಕೊಂಡಿದ್ದು, ಸೆಕ್ಯೂರಿಟಿ ಗಾರ್ಡ್ ಹಾಗೂ ಇತರರು ಸೇರಿ ನಂದಿಸಿದರೆನ್ನಲಾಗಿದೆ. ಅದೆ ಪೆಟ್ರೋಲ್ ಪಂಪಿನಲ್ಲಿ ಇನ್ನೊಂದು ಬಸ್ಸನ್ನೂ ಪಾರ್ಕ್ ಮಾಡಲಾಗಿತ್ತಾದರೂ ಯಾವುದೇ ಅಪಾಯ ಸಂಭವಿಸಿಲ್ಲ. ಅದೃಷ್ಟವಶಾತ್ ಪೆಟ್ರೋಲ್ ಪಂಪಿಗೂ ಬೆಂಕಿ ಹರಡದೆ ದೊಡ್ಡ ಅವಘಡವಾಗುವುವುದು ತಪ್ಪಿದಂತಾಗಿದೆ.