ಕಾಪುವಿನಲ್ಲಿ ದನ ಕಳವು ಪ್ರಕರಣ: ನಾಲ್ವರು ಆರೋಪಿಗಳ ಬಂಧನ
ಜಾನುವಾರುಗಳನ್ನು ಟೆಂಪೋದಲ್ಲಿ ಹಿಂಸಾತ್ಮಕವಾಗಿ ಕಟ್ಟಿಕೊಂಡು ಸಾಗಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಮೊದಲ ಆರೋಪಿ ಕಳತ್ತೂರು ಗ್ರಾಮದ ಉಮ್ಮರಬ್ಬ (64) ಅವರನ್ನು ಸೆ.19ರಂದು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ತಲೆಮರೆಸಿಕೊಂಡಿದ್ದ ಆರೋಪಿಗಳಾದ ಮೊಹಮ್ಮದ್ ಶರೀಫ್ (31), ಶಂಶುದ್ದೀನ್ (57) ಹಾಗೂ ಮಹಮ್ಮದ್ ಆಸೀರ್ (24) ಅವರನ್ನು ಸೆ.20ರಂದು ಕಾಪುವಿನ ಕೊಪ್ಪಲಂಗಡಿಯಲ್ಲಿ ಟೆಂಪೋ ಸಮೇತ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ KA 19 B 5641 ನೋಂದಣಿ ಸಂಖ್ಯೆಯ ಟೆಂಪೋ ಹಾಗೂ ದನವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸೆ.19ರಂದು ಸಂಜೆ ಕಳತ್ತೂರು ಗ್ರಾಮದ ನಡಿಗುತ್ತು ಎಂಬಲ್ಲಿ ವಸಂತಿ ಸುನೀತಾ ಕ್ವಾಡ್ರಸ್ ಅವರು ಮೇಯಲು ಬಿಟ್ಟಿದ್ದ ಐದು ದನಗಳ ಪೈಕಿ ದನವೊಂದು ಕಾಣೆಯಾಗಿತ್ತು. ದನವನ್ನು ಹುಡುಕುತ್ತಿದ್ದ ವೇಳೆ ಸಮೀಪದಲ್ಲಿ ನಿಂತಿದ್ದ ಟೆಂಪೋವೊಂದರಲ್ಲಿ ಕಾಣೆಯಾಗಿದ್ದ ದನದ ಜತೆಗೆ ಮತ್ತೊಂದು ದನವನ್ನೂ ಹಿಂಸಾತ್ಮಕವಾಗಿ ಕಟ್ಟಿರುವುದು ಕಂಡುಬಂದಿದೆ.
ಟೆಂಪೋವನ್ನು ಪರಿಶೀಲಿಸಿದಾಗ ಅದರ ನೋಂದಣಿ ಸಂಖ್ಯೆ KA 19 B 5641 ಎಂದು ತಿಳಿದುಬಂದಿದ್ದು, ವಾಹನದ ಬಳಿ ದೂರುದಾರರಿಗೆ ಪರಿಚಿತರಾದ ಉಮ್ಮರಬ್ಬ ಸೇರಿದಂತೆ ನಾಲ್ವರು ಇದ್ದರು. ದೂರುದಾರರನ್ನು ಕಂಡ ತಕ್ಷಣ ಆರೋಪಿಗಳು ಟೆಂಪೋವನ್ನು ಚಲಾಯಿಸಿಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಈ ಕುರಿತು ವಸಂತಿ ಸುನೀತಾ ಕ್ವಾಡ್ರಸ್ ನೀಡಿದ ದೂರಿನ ಮೇರೆಗೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ. ಪ್ರಕರಣ ದಾಖಲಾದ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಾರ್ಕಳ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಇಶಿತಾ ಗುಪ್ತ ಹಾಗೂ ಕಾಪು ಪೊಲೀಸ್ ವೃತ್ತ ನಿರೀಕ್ಷಕ ಅಝಮತ್ ಆಲಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಶಿರ್ವಾ ಠಾಣೆ ಉಪನಿರೀಕ್ಷಕ ಮಂಜುನಾಥ ಮರಬದ, ಪಡುಬಿದ್ರಿ ಠಾಣೆ ಉಪನಿರೀಕ್ಷಕ ಶಕ್ತಿವೇಲು. ಇ, ಅನಿಲ್ ಕುಮಾರ್ ಟಿ. ನಾಯ್ಕ್, ಹೆಬ್ರಿ ಠಾಣೆ ಉಪನಿರೀಕ್ಷಕ ಲೋಹಿತ್ ಕುಮಾರ್ ಹಾಗೂ ಶಿರ್ವಾ, ಕಾಪು, ಪಡುಬಿದ್ರಿ ಠಾಣೆಗಳ ಸಿಬ್ಬಂದಿ ಮತ್ತು ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯ ಸಿ.ಡಿ.ಆರ್. ವಿಭಾಗದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.