-->
ಮಣಿಪಾಲ: ಎಂಡಿಎಂಎ ಮಾದಕ ವಸ್ತು ಮಾರಾಟ: ಇಬ್ಬರು ಆರೋಪಿಗಳ ಬಂಧನ

ಮಣಿಪಾಲ: ಎಂಡಿಎಂಎ ಮಾದಕ ವಸ್ತು ಮಾರಾಟ: ಇಬ್ಬರು ಆರೋಪಿಗಳ ಬಂಧನ


ಮಣಿಪಾಲದ ಪೆರಂಪಳ್ಳಿ ಬ್ರಿಡ್ಜ್‌ ಬಳಿ ಕಾರಿನಲ್ಲಿ ಎಂಡಿಎಂಎ  ಮಾದಕ ವಸ್ತು ಸಾಗಿಸಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಉಡುಪಿ ತಾಲೂಕಿನ ಕಟಪಾಡಿ ಸಮೀಪದ ಪಳ್ಳಿಗುಡ್ಡೆಯ ಅಕ್ಬರ್ ಮಹಮ್ಮದ್ ಬ್ಯಾರಿ (44) ಹಾಗೂ ಬೆಂಗಳೂರಿನ ಎಂ.ಎಸ್. ಪಾಳ್ಯದ ಸೈಯದ್ ಸುಹೇಲ್ (26) ಎಂದು ಗುರುತಿಸಲಾಗಿದೆ.

ಸೆ.17ರಂದು ಮಧ್ಯರಾತ್ರಿ 12.10ರ ಸುಮಾರಿಗೆ ಖಚಿತ ಮಾಹಿತಿ ಮೇರೆಗೆ ಪೆರಂಪಳ್ಳಿ ಬ್ರಿಡ್ಜ್‌ ಬಳಿ  ಬಿಳಿ ಬಣ್ಣದ ಮಾರುತಿ ಸ್ವಿಫ್ಟ್ ಕಾರನ್ನು ಪೊಲೀಸರು ತಡೆದು ಪರಿಶೀಲಿಸಿದರು. ಈ ವೇಳೆ ಕಾರಿನಲ್ಲಿ ಸುಮಾರು 1 ಲಕ್ಷ ಮೌಲ್ಯದ 30 ಗ್ರಾಂ ತೂಕದ MDMA, 40 ಸಾವಿರ ಮೌಲ್ಯದ ನಾಲ್ಕು ಮೊಬೈಲ್‌ಗಳು, 5 ಸಾವಿರ ಮೌಲ್ಯದ ಡಾಂಗಲ್ ಹಾಗೂ 9,500 ನಗದು ಪತ್ತೆಯಾಗಿದೆ.

ಮಾದಕ ವಸ್ತು ಸಾಗಾಟಕ್ಕೆ ಬಳಸಿದ್ದ 3 ಲಕ್ಷ ಮೌಲ್ಯದ ಕಾರನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಬೆಂಗಳೂರಿನಿಂದ MDMA ತಂದು ಉಡುಪಿ, ಪೆರಂಪಳ್ಳಿ ಹಾಗೂ ಮಣಿಪಾಲ ಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ, ಮಣಿಪಾಲ ಠಾಣಾ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಸಿಬ್ಬಂದಿಗಳಾದ ಪ್ರವೀಣ್ ಕುಮಾರ್, ಪ್ರವೀಣ್ ಶೆಟ್ಟಿಗಾರ್, ರಾಜೇಶ್ ಹೆರ್ಗ, ವಿಶ್ವಜಿತ್, ಸುಕುಮಾರ್ ಶೆಟ್ಟಿ, ವಿದ್ಯಾ ನಾಯಕ್, ದೀಕ್ಷಿತ್, ಉಮೇಶ್, ಲಕ್ಷ್ಮೀಶ ಹಾಗೂ ಸಲೀಂ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಪ್ರಕರಣದ ತನಿಖೆಯನ್ನು ಪಿಎಸ್‌ಐ ತಿಮ್ಮೇಶ್ ಬಿ.ಎನ್. ನಡೆಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article