ಮಂಗಳೂರು ಜೈಲಿನಲ್ಲಿ ಭಾಸ್ಕರ್ ಶೆಟ್ಟಿ ಕೊಲೆ ಆರೋಪಿಗಳಿಗೆ ಹಲ್ಲೆ ಪ್ರಕರಣ: 14 ಮಂದಿ ಆರೋಪಿಗಳು ದೋಷಿಗಳೆಂದು ತೀರ್ಪು
ಉಡುಪಿಯ ಉದ್ಯಮಿ ಭಾಸ್ಕರ ಶೆಟ್ಟಿ ಭೀಕರ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ನವನೀತ ಶೆಟ್ಟಿ ಹಾಗೂ ಜ್ಯೋತಿಷಿ ನಿರಂಜನ್ ಭಟ್ ಮೇಲೆ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಕೊಲೆಯತ್ನ ನಡೆಸಿ, ₹5 ಲಕ್ಷ ಸುಲಿಗೆಗೆ ಯತ್ನಿಸಿದ್ದ ಪ್ರಕರಣದಲ್ಲಿ ಒಟ್ಟು 14 ಮಂದಿ ಆರೋಪಿಗಳು ದೋಷಿಗಳು ಎಂದು ಮಂಗಳೂರಿನ ತ್ವರಿತಗತಿ ನ್ಯಾಯಾಲಯ ತೀರ್ಪು ನೀಡಿದೆ.
ದೋಷಿಗಳಿಗೆ ವಿಧಿಸಬೇಕಾದ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯವು ಸೆಪ್ಟೆಂಬರ್ 16ರಂದು ಪ್ರಕಟಿಸಲಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ಬರ್ಕೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಚಾರ್ಜ್‌ಶೀಟ್ ಪ್ರಕಾರ, 2017ರ ಸೆಪ್ಟೆಂಬರ್ 11ರಂದು ಮಧ್ಯಾಹ್ನ ಮಂಗಳೂರು ಜೈಲಿನ ‘ಬಿ’ ಬ್ಲಾಕ್ ವರಾಂಡದಲ್ಲಿ ಈ ಭೀಕರ ಗ್ಯಾಂಗ್ ದಾಳಿ ನಡೆದಿತ್ತು. ಭಾಸ್ಕರ ಶೆಟ್ಟಿ ಕೊಲೆ ಕೇಸ್‌ನಲ್ಲಿ ವಿಚಾರಣಾ ಕೈದಿಗಳಾಗಿದ್ದ ನವನೀತ ಶೆಟ್ಟಿ ಹಾಗೂ ನಿರಂಜನ್ ಭಟ್ ತಮ್ಮ ಕೇಸಿನ ಮುಂದಿನ ದಿನಾಂಕ ತಿಳಿಯಲು ಜೈಲರ್ ಆಫೀಸ್ ಕಡೆಗೆ ತೆರಳುತ್ತಿದ್ದಾಗ ಖೈದಿಗಳ ಗ್ಯಾಂಗ್ ದಾಳಿ ಮಾಡಿತ್ತು.ಆರೋಪಿಗಳು ಕೈ-ಕಾಲುಗಳಿಂದ ತುಳಿದು, ಪೈಪ್‌ನಿಂದ ತಲೆ ಹಾಗೂ ಬೆನ್ನಿಗೆ ಹಲ್ಲೆ ನಡೆಸಿದ್ದರು. ಬಳಿಕ ಅಂಗಳಕ್ಕೆ ಎಳೆದು ಹಾಕಿ, ಭಾರವಾದ ಸ್ಟೀಲ್ ಡ್ರಮ್ ಹಾಗೂ ಕ್ಯಾರಂ ಬೋರ್ಡ್‌ನಿಂದ ತಲೆಗೆ ಹೊಡೆದು ಕೊಲೆ ಮಾಡಲು ಯತ್ನಿಸಿದ್ದರು. ಇದನ್ನು ಬಿಡಿಸಲು ಬಂದ ಜೈಲು ಭದ್ರತಾ ಸಿಬ್ಬಂದಿಯ ಸಮವಸ್ತ್ರ ಹಿಡಿದು ಎಳೆದಾಡಿ ಸರ್ಕಾರಿ ಕರ್ತವ್ಯಕ್ಕೂ ಅಡ್ಡಿಪಡಿಸಿದ್ದರು.
ಹಲ್ಲೆ ನಡೆಸಿದ್ದ ಖೈದಿಗಳ ಗ್ಯಾಂಗ್, “ಭಾಸ್ಕರ ಶೆಟ್ಟಿ ಕೊಲೆ ಪ್ರಕರಣವನ್ನು ಒಪ್ಪಿಕೊಳ್ಳಬೇಕು, ಇಲ್ಲದಿದ್ದರೆ 5 ಲಕ್ಷ ರೂ. ಹಣ ತರಿಸಿ ಕೊಡಬೇಕು. ತಪ್ಪಿದರೆ ಜೈಲಿನಲ್ಲೇ ಕೊಲೆ ಮಾಡುತ್ತೇವೆ” ಎಂದು ಜೀವ ಬೆದರಿಕೆ ಒಡ್ಡಿ ಸುಲಿಗೆಗೆ ಯತ್ನಿಸಿತ್ತು. ಈ ಸಂಬಂಧ ಬರ್ಕೆ ಪೊಲೀಸರು ಗ್ಯಾಂಗ್ ವಿರುದ್ಧ ಐಪಿಸಿ (IPC) ಸೆಕ್ಷನ್ 120(B), 143, 147, 148, 341, 323, 324, 384, 506, 307, 353 ಹಾಗೂ 149 ಅಡಿಯಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, “ತ್ವರಿತಗತಿ ನ್ಯಾಯಾಲಯವು ಒಟ್ಟು 14 ಮಂದಿಯನ್ನು ಅಪರಾಧಿಗಳು ಎಂದು ಘೋಷಿಸಿದೆ. ದೋಷಿಗಳ ಪೈಕಿ ಲಾಯ್ ವೇಗಾಸ್, ಧನರಾಜ್ ಪೂಜಾರಿ ಹಾಗೂ ಅಭಿಷೇಕ್ ಈಗಾಗಲೇ ಇತರ ಅಪರಾಧ ಪ್ರಕರಣಗಳಲ್ಲಿ ಜೈಲಿನಲ್ಲಿದ್ದಾರೆ. ಜಾಮೀನಿನಲ್ಲಿದ್ದ ಇತರ 10 ಮಂದಿ ದೋಷಿಗಳನ್ನು ಕೋರ್ಟ್ ಆದೇಶದಂತೆ ವಶಕ್ಕೆ ಪಡೆಯಲಾಗಿದೆ. ಗೈರಾದ ಒಬ್ಬ ಅಪರಾಧಿಯ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ. ಸೆಪ್ಟೆಂಬರ್ 16ರಂದು ನ್ಯಾಯಾಲಯ ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ” ಎಂದು ತಿಳಿಸಿದ್ದಾರೆ.