ಮನುಸ್ಮೃತಿ ಮನಸ್ಥಿತಿಯ ದಲಿತರಿಂದ ಸಂವಿಧಾನಕ್ಕೆ ಅಪಮಾನ: ವಿನಯ್ ಕುಮಾರ್ ಸೊರಕೆ
ಮನುಸ್ಮೃತಿಯ ಮನಸ್ಥಿತಿಯ ದಲಿತರ ಮೂಲಕ ಭಾರತದ ಸಂವಿಧಾನಕ್ಕೆ ಅಪಮಾನ ಮಾಡುವ ಕೆಲಸವನ್ನು ಬಿಜೆಪಿಗರು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಆಕ್ರೋಶ ವ್ಯಕ್ತಪಡಿಸಿದರು.
ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ ಮಾಡಿರುವುದನ್ನು ಖಂಡಿಸಿ ಕೆಪಿಸಿಸಿ ಪ್ರಚಾರ ಸಮಿತಿ ವತಿಯಿಂದ ಉಡುಪಿಯ ಅಜ್ಜರಕಾಡಿನ ಗಾಂಧಿ ಪ್ರತಿಮೆ ಎದುರು ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಿಜೆಪಿಗರೇ ಸೃಷ್ಟಿಸಿರುವ ಮನುಸ್ಮೃತಿಯ ಮನಸ್ಥಿತಿಯಿಂದ ದಲಿತರ ಮೂಲಕ ಅಂಬೇಡ್ಕರ್ ಅವರ ಸಂವಿಧಾನಕ್ಕೆ ಅಪಮಾನ ಮಾಡಲಾಗುತ್ತಿದೆ. ಇದನ್ನು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಮಹೇಂದ್ರ ಭಟ್ ಸಮರ್ಥಿಸಿಕೊಂಡಿರುವುದು ದುರದೃಷ್ಟಕರ. ಇಂತಹ ಬೆಳವಣಿಗೆಗಳು ದೇಶವನ್ನು ಮತ್ತೆ ಹದಿನೆಂಟನೇ ಶತಮಾನಕ್ಕೆ ಕೊಂಡೊಯ್ಯುವ ಪ್ರಯತ್ನವಾಗಿದೆ. ಸಮಾಜದಲ್ಲಿರುವ ಅಸಮಾನತೆ, ಮೇಲು-ಕೀಳು ಹಾಗೂ ಅಸ್ಪೃಶ್ಯತೆಗಳನ್ನು ದೇವರು ಸೃಷ್ಟಿಸಿಲ್ಲ; ಮನುಷ್ಯರೇ ಸೃಷ್ಟಿಸಿದ್ದಾರೆ. ದೇಶದ ಮೂಲ ನಿವಾಸಿಗಳಾದ ದಲಿತರನ್ನು ಅಸ್ಪೃಶ್ಯತೆಯ ಹೆಸರಿನಲ್ಲಿ ಶೋಷಿಸುವ ಪ್ರಯತ್ನ ನಡೆಯುತ್ತಿದೆ. ದೇಶದಲ್ಲಿ 50 ಸಾವಿರಕ್ಕೂ ಅಧಿಕ ದಲಿತರ ಮೇಲೆ ಅನ್ಯಾಯ ನಡೆಯುತ್ತಿದ್ದರೂ ಅದನ್ನು ಬಿಜೆಪಿ ಸಮರ್ಥಿಸಿಕೊಳ್ಳುತ್ತಿರುವುದು ದುರದೃಷ್ಟಕರ ಎಂದರು.
ಮನ್ ಕಿ ಬಾತ್‌ನಲ್ಲಿ ವಿವಿಧ ವಿಷಯಗಳ ಬಗ್ಗೆ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆ ರಾಮಮಂದಿರದ ಹಣದ ದುರ್ಬಳಕೆ ಆರೋಪದ ಕುರಿತು ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದ ಸೊರಕೆ, ಪ್ರಧಾನಿ ಮೋದಿ ಅವರ ‘ನಾ ಖಾವುಂಗಾ, ನಾ ಖಾನೇ ದೂಂಗಾ’ ಘೋಷಣೆ ಎಲ್ಲಿ ಹೋಯಿತು ಎಂದು ಲೇವಡಿ ಮಾಡಿದರು.
ಪ್ರತಿಭಟನೆಯಲ್ಲಿ ಗಾಂಧೀಜಿ ಪ್ರತಿಮೆಗೆ ಹಾರ ಹಾಕುವ ಮೂಲಕ ಸತ್ಯಾಗ್ರಹಕ್ಕೆ ಚಾಲನೆ ನೀಡಲಾಯಿತು.
ಬೈಂದೂರು ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಮಾತನಾಡಿ, ದಲಿತರನ್ನು ದಲಿತರಿಂದಲೇ ಪ್ರತ್ಯೇಕಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ದಲಿತರನ್ನೇ ಬಳಸಿಕೊಂಡು ಮತ್ತೊಬ್ಬ ದಲಿತರನ್ನು ತುಳಿಯುವ ಪ್ರಯತ್ನ ನಡೆಯುತ್ತಿದೆ. ಪೊಲೀಸರನ್ನು ಬಳಸಿಕೊಂಡು ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಕಾಂಗ್ರೆಸ್ ಇಂತಹ ಪ್ರಕರಣಗಳಿಗೆ ಹೆದರುವುದಿಲ್ಲ. ಪೊಲೀಸರ ಮೂಲಕ ದೇಶದಲ್ಲಿ ದಲಿತರನ್ನು ದಮನಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ವೈರಸ್ ಇದ್ದಂತೆ. ಎಷ್ಟು ಆ್ಯಂಟಿಬಯಾಟಿಕ್ ಕೊಟ್ಟರೂ ಬೇರೆ ಬೇರೆ ರೂಪದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತದೆ ಎಂದು ವ್ಯಂಗ್ಯವಾಡಿದ ಅವರು, ದೇಶದ ಯುವಜನತೆ ಒಪ್ಪಿಕೊಳ್ಳುತ್ತಿರುವ ನಾಯಕ ರಾಹುಲ್ ಗಾಂಧಿ ಅವರನ್ನು ರಾಜಕೀಯವಾಗಿ ತುಳಿಯುವ ಉದ್ದೇಶದಿಂದ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಬಿಜೆಪಿಗರು ಎಷ್ಟೇ ಪ್ರಯತ್ನಿಸಿದರೂ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ಅವರ ನೈತಿಕ ಬಲವನ್ನು ಕುಗ್ಗಿಸಲು ಸಾಧ್ಯವಿಲ್ಲ. ಬಾಡಿಗೆ ಗುಂಡಾಗಳನ್ನು ಕರೆತಂದು ಪ್ರತಿಭಟನೆ ಹತ್ತಿಕ್ಕುವ ಪ್ರಯತ್ನ ಮಾಡಲಾಗಿದೆ. ಕಾಂಗ್ರೆಸ್ ಇಂತಹ ಮಾರ್ಗವನ್ನು ಎಂದಿಗೂ ಅನುಸರಿಸಿಲ್ಲ ಎಂದು ಹೇಳಿದರು. ದಲಿತ ಸಂಘಟನೆಗಳ ಕಾರ್ಯಕರ್ತರಿಗೆ ತಪ್ಪು ಮಾಹಿತಿ ನೀಡಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ದೇಶಭಕ್ತ ದಲಿತ ನಾಯಕರನ್ನು ಪ್ರತ್ಯೇಕಿಸುವ ಪ್ರಯತ್ನ ನಡೆಯುತ್ತಿದೆ. ಬಿಜೆಪಿ ಅನುಸರಿಸುತ್ತಿರುವ ಒಡೆದು ಆಳುವ ನೀತಿಯನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದರು.ದೇಶದ ಅಖಂಡತೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುವ ನಿಟ್ಟಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಪಮಾನ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸುಬ್ರಹ್ಮಣ್ಯ ಭಟ್ ಆಗ್ರಹಿಸಿದರು.
ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮಾತನಾಡಿ,, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಮನುಷ್ಯರು ನಿಜವಾದ ಮನುಷ್ಯರಾಗಿ ಬದುಕುವ ಅಗತ್ಯವಿದೆ. ಆದರೆ ಇಂದು ನಾವು ಮಾನವರಾಗುವ ಬದಲು ದಾನವರಾಗುತ್ತಿರುವುದು ವಿಷಾದನೀಯ. ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಿಸಿದ ಬಿಜೆಪಿಗರು ಕೇವಲ ಮೈದಾನವನ್ನು ಶುಚಿಗೊಳಿಸುವುದಲ್ಲ, ಅವರ ಅಂತರಂಗ ಹಾಗೂ ಮನಸ್ಥಿತಿಯೂ ಶುದ್ಧವಾಗಬೇಕಿದೆ ಎಂದು ವ್ಯಂಗ್ಯವಾಡಿದರು.ತ ಪ್ಪುಗಳನ್ನು ಎತ್ತಿ ಹಿಡಿದು ಪ್ರಶ್ನಿಸಿದರೆ ಅಂತಹವರನ್ನು ದೇಶದ್ರೋಹಿಗಳೆಂದು ಬಿಂಬಿಸಲಾಗುತ್ತದೆ. ಆದರೆ ಬಿಜೆಪಿಗರನ್ನು ಹೊಗಳಿದರೆ ದೇಶಪ್ರೇಮಿಗಳೆಂದು ಕರೆಯಲಾಗುತ್ತದೆ ಎಂದು ಟೀಕಿಸಿದರು.
ಸುದರ್ಶನ್ ಮತ್ತು ಬಳಗ ದವರು ರಘುಪತಿ ರಾಘವ ಹಾಗೂ ವೈಷ್ಣವ ಜನತೋ ಭಜನೆ ಹಾಡುವ ಮೂಲಕ ಗಾಂಧಿ ಸ್ಮೃತಿ ಮಾಡಿದರು. ಪ್ರತಿಭಟನೆಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ, ಕಾಂಗ್ರೆಸ್ ಪ್ರಮುಖರಾದ ಅಶೋಕ್ ಕುಮಾರ್ ಕೊಡವೂರು, ರಮೇಶ್ ಕಾಂಚನ್, ಹರಿಪ್ರಸಾದ್ ರೈ,ಪ್ರಖ್ಯಾತ್ ಶೆಟ್ಟಿ, ಜ್ಯೋತಿ ಹೆಬ್ಬಾರ್ ಮೊದಲಾದವ್ರು ಭಾಗವಹಿಸಿದ್ದರು.


.jpeg)
