ಸೆ.14- ಸೆ.20: ಅಂಬಲಪಾಡಿ ಶ್ರೀ ಬಾಲ ಗಣಪತಿ ಸಮಿತಿಯ 50ನೇ ವರ್ಷದ ಬಾಲಗಣೇಶೋತ್ಸವ ಸುವರ್ಣ ಸಂಭ್ರಮ
ಅಂಬಲಪಾಡಿ ಶ್ರೀ ಬಾಲ ಗಣಪತಿ ಸಮಿತಿಯ 50ನೇ ವರ್ಷದ ಬಾಲಗಣೇಶೋತ್ಸವ ಸುವರ್ಣ ಮಹೋತ್ಸವ ಸಮಾರಂಭವು ಸೆ.14ರಿಂದ ಸೆ.20ರವರೆಗೆ ಏಳುದಿನಗಳ ಕಾಲ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದ ಎದುರಿನ ಮೈದಾನದಲ್ಲಿ ಜರಗಲಿದೆ ಎಂದು ಸುವರ್ಣ ಸಮಿತಿ ಅಧ್ಯಕ್ಷ ಎಚ್. ಜಯಪ್ರಕಾಶ್ ಕೆದ್ಲಾಯ ತಿಳಿಸಿದರು.
ಅವರು ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಸುವರ್ಣ ಮಹೋತ್ಸವ ಅಂಗವಾಗಿ ಸೆ. 17ರಂದು ವಿದ್ವಾನ್ ನಾಯರ್ ಬೆಟ್ಟು ಶ್ರೀ ರಮೇಶಭಟ್ ಇವರ ನೇತ್ರತ್ವದಲ್ಲಿ 'ಸಹಸ್ರನಾಳಿಕೇರ ಗಣಯಾಗ' ನಡೆದು ಮಹಾ ಅನ್ನ ಸಂತರ್ಪಣೆ ಜರಗಲಿದೆ. ಸುವರ್ಣ ಮಹೋತ್ಸವ ಸಭಾಕಾರ್ಯಕ್ರಮವನ್ನು ಸಂಜೆ 5.30ಕ್ಕೆ ಅದಮಾರು ಮಠದ ಶ್ರೀ ವಿಶ್ವ ಪ್ರಿಯ ತೀರ್ಥ ಶ್ರೀಪಾದಂಗಳವರು ಉದ್ಘಾಟಿಸಿ ಆಶೀರ್ವಚನ ನೀಡಲಿರುವರು. ಸಭಾಧ್ಯಕ್ಷತೆಯನ್ನು ಶ್ರೀಗಣೇಶನ ಆರಾಧನೆಗೆ ಸ್ಥಳವಾಕಾಶ ನೀಡಿದ ಕೊಡುಗೈ ದಾನಿ ನಾಡೋಜ ಡಾ. ಜಿ.ಶಂಕರ್ ಈ ಕಾರ್ಯಕ್ರಮದಲ್ಲಿ ವಹಿಸಿಕೊಂಡಿದ್ದು ಮುಖ್ಯ ಅತಿಥಿಗಳು ವಿಶೇಷ ಆಹ್ವಾನಿತರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ, ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಶಾಲಾವಿದ್ಯಾರ್ಥಿಗಳಿಗೆ ನಡೆದ ಸ್ಪರ್ಧೆಯ ವಿಜೇತರಿಗೆ ಬಹುಮಾನ ಅಶಕ್ತರಿಗ ಸಹಾಯ, ಆರ್ಥಿಕವಾಗಿ ಹಿಂದುಳಿದ ಅಶಕ್ತರೊಬ್ಬರಿಗೆ ಮನೆ ಕಟ್ಟಿಕೊಡುವ ಸಂಕಲ್ಪವಿದೆ ಎಂದರು.
ಪ್ರತೀ ದಿನ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ದಿನಂಪ್ರತಿ ನಾಟಕ, ರಂಗ ಸಂಗೀತ, ಯಕ್ಷತೆಲಿಕೆ, ಜನಪದ ಕಲರವ, ಸಂಗೀತ ಗಾನ ಸಂಭ್ರಮ, ಹಾಗೂ ಸ್ಥಳೀಯ ಪ್ರತಿಭೆಗಳಿಂದ ವಿವಿಧ ವಿನೋದಾವಳಿಗಳು ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿದೆ. ಸಮಾರೋಪ ಸಮಾರಂಭವನ್ನು ಸುವರ್ಣ ಸಂಭ್ರಮದ ಆರನೇ ದಿನದಂದು ಸಮಿತಿಯ ಗೌರವಾಧ್ಯಕ್ಷರಾದ ನಿ.ಬೀ ವಿಜಯ ಬಲ್ಲಾಳ್ ಉದ್ಘಾಟಿಸಲಿದ್ದು ಸಂಸದರಾದ ಕೋಟಶ್ರೀನಿವಾಸ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರಗಲಿದೆ. ಸಾಧಕರಾಗಿ ಗುರುತಿಸಿಕೊಂಡಿರುವ ಮೀರಾಭಟ್ಟ, ಜಯಕರ ಶೆಟ್ಟಿ, ರಾಘವೇಂದ್ರ ಉಪಾಧ್ಯ ಹಾಗೂ ಜಯಾನಂದ ಶೆಟ್ಟಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಸುಮಾರು 10,000 ಕ್ಕೂ ಮಿಕ್ಕಿ ಸಂಖ್ಯೆಯಲ್ಲಿ ಈ ಎಲ್ಲಾ ಕಾರ್ಯಕ್ರಮಕ್ಕೆ ಭಕ್ತಾಭಿಮಾನಿಗಳು ಭಾಗವಹಿಸುವ ನಿರೀಕ್ಷೆ ಇದೆ.
ಸೆ.20ರಂದು ಆಕರ್ಷಕ ಭವ್ಯ ಗಣೇಶ ವಿಸರ್ಜನಾ ಶೋಭಾಯಾತ್ರೆಯಲ್ಲಿ ಕುಣಿತ ಭಜನಾ ತಂಡಗಳು, ಕೀಲು ಕುದುರೆ, ತಾಲೀಮು, ಮಂಗಳವಾದ್ಯ, ಚೆಂಡೆ, 18ಕ್ಕೂ ಮಿಕ್ಕಿ ವಿವಿಧ ಆಕರ್ಷಣೆಯ ಟ್ಯಾಬ್ಲೊಗಳು ನಾಸಿಕ್ ಬ್ಯಾಂಡ್, ಹುಲಿವೇಷ ತಂಡಗಳು ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಭಾಗವಹಿಸಲಿವೆ ಎಂದರು.
ಸುದ್ದಿಗೋಷ್ಟಿಯಲ್ಲಿ ಬಾಲಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಹರೀಶ್ ಶೆಟ್ಟಿ, ಅಧ್ಯಕ್ಷ ಕೀರ್ತಿ ಶೆಟ್ಟಿ, ಕಾರ್ಯದರ್ಶಿ ರಮೇಶ್ ಉಪಾಧ್ಯ ಹಾಗೂ ಸುವರ್ಣ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಯೋಗೀಶ್ ಶೆಟ್ಟಿ ಉಪಸ್ಥಿತರಿದ್ದರು.