-->
“ಆಸ್ಕರ್ ಫೆರ್ನಾಂಡೀಸ್ ರಾಜಕಾರಣವನ್ನು ಅಧಿಕಾರಕ್ಕಾಗಿ ಬಳಸದೇ ಜನಸೇವೆಗಾಗಿ ಬಳಸಿದ ಮಹಾನ್ ಮುತ್ಸದ್ದಿ”

“ಆಸ್ಕರ್ ಫೆರ್ನಾಂಡೀಸ್ ರಾಜಕಾರಣವನ್ನು ಅಧಿಕಾರಕ್ಕಾಗಿ ಬಳಸದೇ ಜನಸೇವೆಗಾಗಿ ಬಳಸಿದ ಮಹಾನ್ ಮುತ್ಸದ್ದಿ”


ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡೀಸ್ ಅವರು ರಾಜಕಾರಣವನ್ನು ಅಧಿಕಾರಕ್ಕಾಗಿ ಬಳಸದೇ ಜನಸೇವೆಗಾಗಿ ಬಳಸಿದ ಮಹಾನ್ ಮುತ್ಸದ್ದಿ ಎಂದು ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ವಿಶ್ರಾಂತ ಸಹ ಸಂಪಾದಕ ಕೆ. ಸುಬ್ರಹ್ಮಣ್ಯ ಅಭಿಪ್ರಾಯಪಟ್ಟಿದ್ಜಾರೆ. 

ಅವರು ಭಾನುವಾರ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಅಸ್ಕರ್ ಅಭಿಮಾನಿ ವರ್ಗದ ವತಿಯಿಂದ ಉಡುಪಿಯ ಇನ್ಫೋಸಿಸ್ ಯಕ್ಷಗಾನ ಕಲಾರಂಗ  ಆಡಿಟೋರಿಯಂನಲ್ಲಿ ಆಸ್ಕರ್ ಫೆರ್ನಾಂಡೀಸ್ ಅವರ 5ನೇ ಸಂಸ್ಮರಣಾ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿ, ದೆಹಲಿಯಲ್ಲಿ ಅಸ್ಕರ್ ಅವರ ಜೊತೆಗಿನ ಒಡನಾಟದ ಅನುಭವಗಳನ್ನು ಹಂಚಿಕೊಂಡರು. 

ದೆಹಲಿಯಲ್ಲಿಯೂ ಆಸ್ಕರ್ ಅವರೊಂದಿ ಯಾವಾಗಲೂ ಜನಸಾಮಾನ್ಯರು ಇರುತ್ತಿದ್ದರೇ ಹೊರತು ರಾಜಕೀಯ ನಾಯಕರುಗಳಲ್ಲ. ಸಂಸದರಾಗಿ ತಮ್ಮ 41 ವರ್ಷಗಳ ಪೈಕಿ ಕೇವಲ ಮೂರುವರೆ ವರ್ಷಗಳ ಕಾಲವಷ್ಟೇ ಆಸ್ಕರ್ ಮಂತ್ರಿಯಾಗಿದ್ದರು. ವೀರೇಂದ್ರ ಪಾಟೀಲ್ ಅವರನ್ನು ಕರ್ನಾಟಕದ ಮುಖ್ಯಮಂತ್ರಿ ಸ್ಥಾನದಿಂದ ಬದಲಿಸುವ ಸಂದರ್ಭ ತಮ್ಮ ಹೆಸರನ್ನು ಆಕಾಂಕ್ಷಿಗಳ ಪಟ್ಟಿಯಲ್ಲಿ ಸೇರಿಸಬೇಕೇ ಎಂದು ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರು ಕೇಳಿದಾಗಲೂ, ತಾವು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಲ್ಲ ಎಂಬುದಾಗಿ ಸ್ಪಷ್ಟ  ಮಾತುಗಳಲ್ಲಿ ತಿಳಿಸಿದ್ದರು. ಅಧಿಕಾರ, ಮಂತ್ರಿಗಿರಿ ಆಸ್ಕರ್ ಅವರಿಗೆ ಎಂದೂ ಖುಷಿ ಕೊಟ್ಟಿರಲಿಲ್ಲ ಎಂದು ಕೆ. ಸುಬ್ರಹ್ಮಣ್ಯ ಹೇಳಿದರು.


ದೇಶದ ರಾಜಕಾರಣದಲ್ಲಿ ಆಸ್ಕರ್ ಅವರೊಬ್ಬ ‘ಅನ್ ಸಂಗ್ ಹೀರೋ’ (unsung hero) ಆಗಿದ್ದರು. ಹೀಗಾಗೀ ಅವರ ಮರಣಾ ನಂತರವಾದರೂ ಆಸ್ಕರ್ ಅವರ ಸಂದೇಶಗಳು ರಾಜ್ಯವ್ಯಾಪಿ,  ದೇಶವ್ಯಾಪಿಯಾಗಿ ಪಸರಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ ಎಂದರು. 


ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ, ಮಾಜಿ ಸಚಿವ ಅಭಯಚಂದ್ರ ಜೈನ್, ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್, ಜಿ.ಪಂ. ಮಾಜಿಅಧ್ಯಕ್ಷ ಭುಜಂಗ ಶೆಟ್ಟಿ ಮತ್ತಿತರ ಗಣ್ಯರು ಹಾಗೂ ಆಸ್ಕರ್ ಅವರ ಕುಟುಂಬ ಸದಸ್ಯರು ಜೊತೆಯಾಗಿ ಆಸ್ಕರ್ ಅವರ ಭಾವಚಿತ್ರದೆದುರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 


ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರು ವಿಶೇಷ ಉಪನ್ಯಾಸ ನೀಡಿ ಕೆ. ಸುಬ್ರಹ್ಮಣ್ಯ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು. 

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೇಬೈಲ್, ಮಾಜಿ ಅಧ್ಯಕ್ಷ ಜನಾರ್ದನ ತೋನ್ಸೆ, ಕಾಂಗ್ರೆಸ್ ಮುಖಂಡರುಗಳಾದ ದಿನೇಶ್ ಪುತ್ರನ್, ದಿನೇಶ್ ಹೆಗ್ಡೆ ಮೊಳಹಳ್ಳಿ, ಹರಿಪ್ರಸಾದ್ ರೈ, ಭಾಸ್ಕರ ರಾವ್ ಕಿದಿಯೂರು, ಪ್ರಖ್ಯಾತ್ ಶೆಟ್ಟಿ, ಆಸ್ಕರ್ ಅವರ ಆಪ್ತ ಬಳಗದಲ್ಲಿದ್ದ ಸೂರ್ಯ ಪ್ರಕಾಶ್, ಟಿ. ಶಂಭು ಶೆಟ್ಟಿ, ಮೋಹನಚಂದ್ರ ನಂಬಿಯಾರ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಜಿಲ್ಲಾ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸ್ವಾಗತಿಸಿದರು. ನಾಗೇಶ್ ಕುಮಾರ್ ಉದ್ಯಾವರ ಕಾರ್ಯಕ್ರಮ ನಿರೂಪಿಸಿ, ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್ ವಂದಿಸಿದರು. 

ಕಾರ್ಯಕ್ರಮಕ್ಕೂ ಮೊದಲು ವಿದ್ವಾನ್ ಅಶೋಕ್ ಆಚಾರ್ಯ ಮತ್ತು ಸುದರ್ಶನ್ ಪಡುಕರೆ (ತಬಲಾ) ಅವರಿಂದ ಗೀತ ಗಾಯನ ನಡೆಯಿತು.



Ads on article

Advertise in articles 1

advertising articles 2

Advertise under the article