-->
ಉಡುಪಿಯ ರಾಜ 'ಕಡಿಯಾಳಿ ಸಂಕಷ್ಟಹರ ಗಣೇಶ'ನಿಗೆ ಜೋಡುಕಟ್ಟೆಯಲ್ಲಿ ಅದ್ದೂರಿ ಸ್ವಾಗತ

ಉಡುಪಿಯ ರಾಜ 'ಕಡಿಯಾಳಿ ಸಂಕಷ್ಟಹರ ಗಣೇಶ'ನಿಗೆ ಜೋಡುಕಟ್ಟೆಯಲ್ಲಿ ಅದ್ದೂರಿ ಸ್ವಾಗತ


ಉಡುಪಿಯ ಕಡಿಯಾಳಿ ಕಾತ್ಯಾಯಿನಿ ಮಂಟಪದಲ್ಲಿ ಪೂಜಿಸುವ ಕಡಿಯಾಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 60ನೇ ವರ್ಷದ ಉಡುಪಿಯ ರಾಜ ಸಂಕಷ್ಟಹರ ಗಣೇಶನ ವಿಗ್ರಹವನ್ನು ಅದ್ದೂರಿ ಮೆರವಣಿಗೆ ಮೂಲಕ ಕರೆ ತರಲಾಯಿತು. 


ಉಡುಪಿಯ ಇಂದಿರಾನಗರದಲ್ಲಿರುವ ಸಂಪತ್ ರಾವ್ ಅವರ ಮನೆಯಿಂದ ಗಣೇಶನ ವಿಗ್ರಹವನ್ನು ಉಡುಪಿಯ ಜೋಡುಕಟ್ಟೆ ಜಂಕ್ಷನ್ ಗೆ ಕರೆತಂದು ಟ್ಯಾಬ್ಲೋದಲ್ಲಿರಿಸಿ ಭಕ್ತಾದಿಗಳ ಬೈಕ್‌ ರ್ಯಾಲಿಯೊಂದಿಗೆ ಕಡಿಯಾಳಿಗೆ ಕರೆ ತರಲಾಯಿತು.


ಸುಮಾರು 7 ಅಡಿ 8 ಇಂಚು ಎತ್ತರದ ಸುಂದರ ಆಕರ್ಷಕ ಗಣಪನ ಮೂರ್ತಿಯ ಅದ್ದೂರಿ ಮೆರವಣಿಗೆಗೆ ಡಾ. ಟಿಎಂಎ ಪೈ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಡಾ. ಶಶಿಕಿರಣ್ ಉಮಾಕಾಂತ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕಡಿಯಾಳಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೇ ಸಮಾಜದ ನೋವಿಗೆ ಸ್ಪಂದಿಸುವ ಹಾಗೂ ಅವಕಾಶ ವಂಚಿತರಿಗೆ ವಿದ್ಯಾಭ್ಯಾಸಕ್ಕೆ ನೆರವು ನೀಡುವ ಕಾರ್ಯ ಮಾಡುತ್ತಿದೆ. ಬೆಳಕಿಲ್ಲದ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ಸೇರಿದಂತೆ ಆಸರೆ ಟ್ರಸ್ಟ್ ಮೂಲಕ ಹತ್ತಾರು ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. 60ನೇ ವರ್ಷದ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಿರುವುದು ಸಂತಸದ ವಿಚಾರ. ಸಮಿತಿಯ ಸಮಾಜಮುಖಿ ಕಾರ್ಯಗಳು ಇನ್ನಷ್ಟು ವರ್ಷ ಮುಂದುವರಿಯಲಿ ಎಂದು ಹಾರೈಸಿದರು.

ಉಡುಪಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ ಮಾತನಾಡಿ, ಈ ಬಾರಿ ಮುದ್ದಣ ಪುರಾಣದ ಪ್ರಕಾರ 60ನೇ ರೂಪದ ವಿಶೇಷವಾಗಿ ಸಂಕಷ್ಟ ಹರ ಗಣಪತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. 7 ಅಡಿ 9 ಇಂಚು ಎತ್ತರದ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದ್ದು, ರಾಷ್ಟ್ರದ ಸಂಕಷ್ಟಗಳೆಲ್ಲ ಪರಿಹಾರವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಗುವುದು. ಗಣಪತಿಗೆ ಚಿನ್ನದ ಕಿರೀಟ, ಚಿನ್ನದ ಚಕ್ರಸಾರ ಸೇರಿದಂತೆ ವಿವಿಧ ಆಭರಣಗಳನ್ನು ತೊಡಿಸಲಾಗುವುದು ಎಂದರು.

ಉಡುಪಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ, ಶಾಸಕ ಯಶಪಾಲ್ ಎ. ಸುವರ್ಣ, ಕೋಶಾಧಿಕಾರಿ ಎಂ. ವಲ್ಲಭ್ ಭಟ್, ವಜ್ರಮಹೋತ್ಸವ ಸಮಿತಿ ಅಧ್ಯಕ್ಷ ಡಾ. ರವಿರಾಜ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಗಿರೀಶ್ ಎಂ. ಅಂಚನ್, ಕೋಶಾಧಿಕಾರಿ ಕೆ. ಮಂಜುನಾಥ್ ಹೆಬ್ಬಾರ್, ಮೆರವಣಿಗೆ ಸಮಿತಿ ಸದಸ್ಯರಾದ ದಿನೇಶ್ ಅಮೀನ್, ಮೋಹನ್ ಉಪಾಧ್ಯಾಯ, ಕಿಶೋರ್ ಸಾಲಿಯಾನ್, ನಾಗರಾಜ್ ಶೆಟ್ಟಿ, ಭಾರತಿ ಚಂದ್ರಶೇಖರ್, ಸಂಧ್ಯಾ ರಮೇಶ್, ರಜನಿ ಹೆಬ್ಬಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಗಣೇಶನ ಸ್ವಾಗತ ಮೆರವಣಿಗೆಯನ್ನು ಸಾವಿರಾರು ಮಂದಿ ಭಕ್ತಾದಿಗಳು ಕಣ್ತುಂಬಿಕೊಂಡರು. ಸಮಿತಿಯ ವಜ್ರಮಹೋತ್ಸವದ ಪ್ರಯುಕ್ತ ಈ ಬಾರಿ ಗಣೇಶೋತ್ಸವ 7 ದಿನಗಳ ಕಾಲ ವೈಭವದಿಂದ ನಡೆಯಲಿದೆ.

Ads on article

Advertise in articles 1

advertising articles 2

Advertise under the article