ಸೆ.20: ಬ್ರಹ್ಮಾವರ ಕಾಮಧೇನು ಗೋಶಾಲೆಯಲ್ಲಿ ವಿವಿಧ ಸೇವಾ ಯೋಜನೆಗಳಿಗೆ ಚಾಲನೆ
ಬ್ರಹ್ಮಾವರ ನಂಚಾರುವಿನಲ್ಲಿರುವ ಕಾಮಧೇನು ಗೋಶಾಲೆಯಲ್ಲಿ ಉಡುಪಿ ಗೋ ಗ್ರಾಸ ತಂಡ ಹಾಗೂ ವಿವಿಧ ದಾನಿಗಳ ಸಹಕಾರದಿಂದ ಹಲವು ಸೇವಾ ಯೋಜನೆಗಳಿಗೆ ಸೆ.20ರಂದು ಚಾಲನೆ ನೀಡಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ರಾಜೇಂದ್ರ ಚಕ್ಕೇರಾ ತಿಳಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.20ರಂದು ಬೆಳಗ್ಗೆ 8 ಗಂಟೆಗೆ ಗೋಶಾಲಾ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಗೋ ಗ್ರಾಸ ಸೇವೆಗೆ ಹರೀಶ್ ಆಚಾರ್ಯ ಚಾಲನೆ ನೀಡಲಿದ್ದು, ಸಂಸದ ಕೋಟ ಶ್ರೀನಿವಾಸ ಪೂಜಾರಿ ನೇಪಿಯರ್ ಹುಲ್ಲಿನ ನಾಟಿಗೆ ಚಾಲನೆ ನೀಡಲಿದ್ದಾರೆ. ಶಾಸಕ ಯಶ್ಪಾಲ್ ಸುವರ್ಣ ಸ್ಲರಿ ಹೊಂಡಕ್ಕೆ ಚಾಲನೆ ನೀಡಲಿದ್ದಾರೆ. ಕೊಕ್ಕರ್ಣೆ ಕ್ರಿಯೇಟಿವ್ ಕ್ಲಬ್ ವತಿಯಿಂದ ಗೋ ದತ್ತು ಸ್ವೀಕಾರ ನಡೆಯಲಿದ್ದು, ಉಡುಪಿ ಗೋ ಗ್ರಾಸ ತಂಡದವರು ಸಣ್ಣ ಕರುಗಳಿಗೆ ಕೊರಳಪಟ್ಟಿ ವಿತರಿಸಲಿದ್ದಾರೆ ಎಂದರು.
ಶೃಂಗೇರಿ ಜಗದ್ಗುರುಗಳ ಆಶೀರ್ವಾದದೊಂದಿಗೆ 2022ರ ಜನವರಿ 24ರಂದು 12 ದನಗಳಿಂದ ಆರಂಭಗೊಂಡ ಕಾಮಧೇನು ಗೋಶಾಲೆ ಪ್ರಸ್ತುತ ಸುಮಾರು 370 ದನಗಳಿಗೆ ಆಶ್ರಯ ನೀಡುತ್ತಿದೆ. ಬೀಡಾಡಿ, ವಯೋವೃದ್ಧ, ಗಾಯಗೊಂಡ ಹಾಗೂ ಕಸಾಯಿಖಾನೆಗೆ ಸಾಗುವ ಅಪಾಯದಲ್ಲಿದ್ದ ಗಂಡು-ಹೆಣ್ಣು ದನಗಳಿಗೆ ಇಲ್ಲಿ ಆಶ್ರಯ ಕಲ್ಪಿಸಲಾಗುತ್ತಿದೆ. ಗೋಶಾಲೆಯನ್ನು ಯಾವುದೇ ವ್ಯವಹಾರಿಕ ಉದ್ದೇಶದಿಂದ ಆರಂಭಿಸಲಾಗಿಲ್ಲ ಎಂದು ಅವರು ತಿಳಿಸಿದರು.
ಗೋಪ್ರಿಯರು, ಸಂಘ-ಸಂಸ್ಥೆಗಳು ಹಾಗೂ ಕರ್ನಾಟಕ ಬ್ಯಾಂಕ್ ಸೇರಿದಂತೆ ಹಲವರು ಗೋಶಾಲೆಯ ನಿರ್ವಹಣೆಗೆ ನೆರವು ನೀಡುತ್ತಿದ್ದಾರೆ. ಆದರೂ ದಿನದಿಂದ ದಿನಕ್ಕೆ ನಿರ್ವಹಣಾ ವೆಚ್ಚ ಹೆಚ್ಚಾಗುತ್ತಿದ್ದು, ಅದನ್ನು ನಿಭಾಯಿಸುವುದು ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ಸೇವಾ ಯೋಜನೆಗಳನ್ನು ಕೈಗೊಳ್ಳಲಾಗಿದ್ದು, ಗೋಶಾಲೆಯನ್ನು ಉಳಿಸಿ ಬೆಳೆಸಲು ಗೋಪ್ರಿಯರು, ಬಂಧುಮಿತ್ರರು ಹಾಗೂ ದಾನಿಗಳ ಸಹಕಾರ ಅಗತ್ಯವಾಗಿದೆ ಎಂದು ರಾಜೇಂದ್ರ ಚಕ್ಕೇರಾ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಖಜಾಂಚಿ ರಾಮಕೃಷ್ಣ ಆಚಾರ್ಯ, ಟ್ರಸ್ಟಿ ಅಶೋಕ್ ಬಲ್ಲಾಳ್, ಉಡುಪಿ ಗೋ ಗ್ರಾಸ ತಂಡದ ಹರೀಶ್ ಆಚಾರ್ಯ ಹಾಗೂ ಶಶಿಧರ್ ಭಟ್ ಉಪಸ್ಥಿತರಿದ್ದರು.