-->
 ಸಚಿವ ಸಂಪುಟ ಸಭೆಗೆ ಆಗ್ರಹ ಪತ್ರ ಸಲ್ಲಿಸಲು ಹೊರಟ ಸಿಪಿಎಂ ಮೆರವಣಿಗೆಗೆ ತಡೆ

ಸಚಿವ ಸಂಪುಟ ಸಭೆಗೆ ಆಗ್ರಹ ಪತ್ರ ಸಲ್ಲಿಸಲು ಹೊರಟ ಸಿಪಿಎಂ ಮೆರವಣಿಗೆಗೆ ತಡೆ


ಕರಾವಳಿ ಕರ್ನಾಟಕದ ಅಭಿವೃದ್ಧಿ ನೀತಿಯನ್ನು ಜನಪರವಾಗಿ ರೂಪಿಸಬೇಕು. ಕಾರ್ಪೊರೇಟ್ ಪರವಾದ ಪಿಪಿಪಿ ನೀತಿಗೆ ಬದಲಾಗಿ ಶಿಕ್ಷಣ, ಉದ್ಯೋಗ, ಆರೋಗ್ಯ ಹಾಗೂ ವಸತಿ ಸೌಲಭ್ಯಗಳನ್ನು ಒದಗಿಸುವ ನೀತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಸಿಪಿಎಂ ಸಮಿತಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆಗೆ ಆಗ್ರಹ ಪತ್ರ ಸಲ್ಲಿಸಲು ಹೊರಟ ಮೆರವಣಿಗೆಯನ್ನು ಶುಕ್ರವಾರ ಬೆಳಗ್ಗೆ ಬೆಂದೂರ್ ವೆಲ್ ವೃತ್ತದ ಬಳಿ ಪೊಲೀಸರು ತಡೆದು, ನಾಯಕರು ಹಾಗೂ ಕಾರ್ಯಕರ್ತರನ್ನು ವಶಕ್ಕೆ ಪಡೆದರು.


ಸಚಿವ ಸಂಪುಟ ಸಭೆಗೆ 21 ವಿವಿಧ ಬೇಡಿಕೆಗಳನ್ನೊಳಗೊಂಡ ಆಗ್ರಹ ಪತ್ರ ಸಲ್ಲಿಸಲು ಸಿಪಿಎಂ ನಾಯಕರು ಹಾಗೂ ಕಾರ್ಯಕರ್ತರು ಮೆರವಣಿಗೆ ನಡೆಸಲು ಮುಂದಾದರು. ಮೆರವಣಿಗೆಗೂ ಮುನ್ನ ಬೆಂದೂರ್‌ವೆಲ್ ವೃತ್ತದ ಬಳಿ ಧರಣಿ ನಡೆಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.


ಸಿಪಿಎಂ ರಾಜ್ಯ ಕಾರ್ಯದರ್ಶಿ ಡಾ. ಕೆ. ಪ್ರಕಾಶ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಹಾಗೂ ಉಡುಪಿ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಸೇರಿದಂತೆ ಮುಖಂಡರು ಮಾತನಾಡಿ, ಕರಾವಳಿಯ ಅಭಿವೃದ್ಧಿ ನೀತಿಯಲ್ಲಿ ಸ್ಥಳೀಯ ಜನರ ಹಿತಾಸಕ್ತಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.



ಬಳಿಕ ಆಗ್ರಹ ಪತ್ರ ಸಲ್ಲಿಸಲು ಮೆರವಣಿಗೆ ಹೊರಡುತ್ತಿದ್ದಂತೆ ಪೊಲೀಸರು ಬೆಂದೂರ್‌ವೆಲ್ ವೃತ್ತದ ಬಳಿ ಮೆರವಣಿಗೆಯನ್ನು ತಡೆದರು. ಸಿಪಿಎಂ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ವಾಹನಗಳಲ್ಲಿ ಕರೆದೊಯ್ದರು. ಈ ವೇಳೆ ವಾಹನದಲ್ಲಿಯೂ ಸಿಪಿಎಂ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

Ads on article

Advertise in articles 1

advertising articles 2

Advertise under the article