-->
ರಾಜ ದರ್ಬಾರ್ ಮುಗಿಸಿ ಕಡಲೊಡಲು ಸೇರಿದ ಕಡಿಯಾಳಿಯ ಸಂಕಷ್ಟಹರ ಗಣಪ...!

ರಾಜ ದರ್ಬಾರ್ ಮುಗಿಸಿ ಕಡಲೊಡಲು ಸೇರಿದ ಕಡಿಯಾಳಿಯ ಸಂಕಷ್ಟಹರ ಗಣಪ...!


ಏಳು ದಿನಗಳ ಕಾಲ ಕಡಿಯಾಳಿಯಲ್ಲಿ ರಾಜ ದರ್ಬಾರ್ ನಡೆಸಿ ಸಾವಿರಾರು ಭಕ್ತರ ಸಂಕಷ್ಟಗಳನ್ನು ಆಲಿಸಿ, ಭಕ್ತರ ಮನೆ-ಮನಗಳಲ್ಲಿ ಭಕ್ತಿ, ಸಂಭ್ರಮ ಹಾಗೂ ಆಶಾಭಾವ ಮೂಡಿಸಿದ್ದ ಉಡುಪಿಯ ರಾಜ ಕಡಿಯಾಳಿಯ ಸಂಕಷ್ಟಹರ ಗಣೇಶನನ್ನು ಭಕ್ತಿಪೂರ್ವಕವಾಗಿ ಬೀಳ್ಕೊಡಲಾಯಿತು. ರಾಜನಂತೆ ಆರಾಧಿಸಲ್ಪಟ್ಟ ಗಣೇಶನ ವಿಸರ್ಜನಾ ಮೆರವಣಿಗೆ ಭಕ್ತಿಯ ಸಾಗರದ ನಡುವೆ ಅದ್ದೂರಿಯಾಗಿ ನೆರವೇರಿತು.



ಕಡಿಯಾಳಿಯ ಕಾತ್ಯಾಯಿನಿ ಮಂಟಪದಲ್ಲಿ ಮಹಾ ಮಂಗಳಾರತಿ ಪಡೆದುಕೊಂಡ ಅಲ್ಲಿದ ಹೊರಟ ಉಡುಪಿಯ ರಾಜನಿಗೆ ಭಕ್ತರು ಪುಷ್ಪವೃಷ್ಟಿಯ ಮೂಲಕ ಗೌರವಪೂರ್ವಕವಾಗಿ ನಮನ ಸಲ್ಲಿಸಿದರು. ‘ಗಣಪತಿ ಬಪ್ಪಾ ಮೋರಿಯಾ’ ಘೋಷಣೆಗಳೊಂದಿಗೆ ಉಡುಪಿಯ ರಾಜಮಾರ್ಗದಲ್ಲಿ ಸಾಗಿದ ಮೆರವಣಿಗೆ ಕಡಿಯಾಳಿಯಿಂದ ಕಲ್ಸಂಕ ಮಾರ್ಗವಾಗಿ ಶ್ರೀಕೃಷ್ಣಮಠವನ್ನು ತಲುಪಿತು. ಶ್ರೀಕೃಷ್ಣನ ಸನ್ನಿಧಿಗೆ ಆಗಮಿಸಿದ ಸಂಕಷ್ಟಹರ ಗಣೇಶನಿಗೆ ಪರ್ಯಾಯ ಶಿರೂರು ಶ್ರೀಗಳು ಮಹಾ ಮಂಗಳಾರತಿ ಬೆಳಗಿಸಿ ಭಕ್ತಿಭಾವದಿಂದ ಪೂಜೆ ಸಲ್ಲಿಸಿದರು.


ಅಲ್ಲಿಂದ ಡಯಾನ ಸರ್ಕಲ್ ಮೂಲಕ ಸಾಗಿ ಸಿಟಿ ಬಸ್ ನಿಲ್ದಾಣ, ಬನ್ನಂಜೆ ಮಾರ್ಗವಾಗಿ ಮಲ್ಪೆ ಕಡಲತೀರದತ್ತ ಸಾಗಿದ ಮೆರವಣಿಗೆ ಉಡುಪಿಯ ರಾಜನ ವೈಭವಕ್ಕೆ ಸಾಕ್ಷಿಯಾಯಿತು. ಮಾರ್ಗದುದ್ದಕ್ಕೂ ಮನೆಗಳ ಮುಂದೆ, ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಭಕ್ತರು ಗಣೇಶನ ದರ್ಶನ ಪಡೆದು ಪುಷ್ಪಾರ್ಚನೆ ಸಲ್ಲಿಸಿದರು. ಕೆಲವರು ಕೈಮುಗಿದು ಪ್ರಾರ್ಥಿಸಿದರೆ, ಮತ್ತೆ ಕೆಲವರು ಮೊಬೈಲ್‌ಗಳಲ್ಲಿ ಈ ಅಪೂರ್ವ ಕ್ಷಣಗಳನ್ನು ಸೆರೆಹಿಡಿದುಕೊಂಡರು.

ಕಲಾ ವೈಭವದಿಂದ ಕಳೆಗಟ್ಟಿದ ಮೆರವಣಿಗೆ

ವಿಸರ್ಜನಾ ಮೆರವಣಿಗೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾ ಪ್ರಕಾರಗಳು ಗಮನ ಸೆಳೆದವು. ಚೆಂಡೆ ವಾದನದ ಮೊಳಗುವ ನಾದ, ರಕ್ಕಸ ವೇಷಧಾರಿಗಳ ಆಕರ್ಷಕ ಪ್ರದರ್ಶನ ಸೇರಿದಂತೆ ವಿವಿಧ ಕಲಾ ತಂಡಗಳ ವೈವಿಧ್ಯಮಯ ಪ್ರದರ್ಶನಗಳು ಮೆರವಣಿಗೆಯ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದವು. ಭಕ್ತಿ, ಸಂಭ್ರಮ ಮತ್ತು ಸಾಂಸ್ಕೃತಿಕ ವೈಭವ ಒಂದಾಗಿ ಉಡುಪಿಯ ರಾಜನ ಮೆರವಣಿಗೆಗೆ ವಿಶಿಷ್ಟ ಮೆರುಗು ನೀಡಿತು.


ಮೆರವಣಿಗೆ ಸಾಗಿದ ದಾರಿಯುದ್ದಕ್ಕೂ ಭಕ್ತಜನ ಸಾಗರವೇ ಕಂಡುಬಂತು. ರಾಜನ ದರ್ಶನ ಪಡೆಯಲು ಕಾತರರಾಗಿದ್ದ ಭಕ್ತರು ಭಕ್ತಿಭಾವದಿಂದ ಕೈಮುಗಿದು ಪ್ರಾರ್ಥಿಸಿದರು. ಏಳು ದಿನಗಳ ಕಾಲ ತಮ್ಮ ಮನೆ-ಮನಗಳಲ್ಲಿ ನೆಲೆಸಿದ್ದ ಗಣೇಶನನ್ನು ಬೀಳ್ಕೊಡುವ ಕ್ಷಣದಲ್ಲಿ ಹಲವರ ಕಣ್ಣಲ್ಲಿ ಭಾವನೆಗಳು ಮಡುಗಟ್ಟಿದ್ದವು.


ಮಲ್ಪೆಯ ಸೀ ವಾಕ್‌ವೇ ಸಮೀಪ ಸಂಕಷ್ಟಹರ ಗಣೇಶನಿಗೆ ವಿಸರ್ಜನಾ ಪೂಜೆ ನೆರವೇರಿಸಲಾಯಿತು. ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿದ ಬಳಿಕ, ಭಕ್ತರ ಜಯಘೋಷಗಳ ನಡುವೆ ಉಡುಪಿಯ ರಾಜನ ವಿಗ್ರಹವನ್ನು ಮಲ್ಪೆ ಕಡಲಿನಲ್ಲಿ ವಿಸರ್ಜಿಸಲಾಯಿತು.

ಏಳು ದಿನಗಳ ಕಾಲ ಭಕ್ತರ ಕಷ್ಟ-ಸಂಕಷ್ಟಗಳನ್ನು ದೂರಮಾಡುವ ಸಂಕಲ್ಪದೊಂದಿಗೆ ಆರಾಧಿಸಲ್ಪಟ್ಟ ಕಡಿಯಾಳಿಯ ಸಂಕಷ್ಟಹರ ಗಣೇಶನು ಇದೀಗ ಕಡಲಿನ ಒಡಲಿಗೆ ಸೇರಿದ್ದರೂ, ಭಕ್ತರ ಮನದಲ್ಲಿ ಮೂಡಿಸಿದ ಭಕ್ತಿ, ಭರವಸೆ ಮತ್ತು ನೆನಪುಗಳು ಎಂದಿಗೂ ಅಳಿಯದಂತಾದವು. ‘ಮತ್ತೆ ಬಾ ಗಣಪತಿ’ ಎಂಬ ಭಕ್ತರ ಹಾರೈಕೆಯೊಂದಿಗೆ ಉಡುಪಿಯ ರಾಜನ ಏಳು ದಿನಗಳ ರಾಜ ದರ್ಬಾರ್ ಭಕ್ತಿಪೂರ್ವಕವಾಗಿ ಸಂಪನ್ನಗೊಂಡಿತು.

Ads on article

Advertise in articles 1

advertising articles 2

Advertise under the article